Thursday, September 11, 2025
Homeರಾಜ್ಯನಾನು ಎಬಿವಿಪಿ ಕಾರ್ಯಕ್ರಮಕ್ಕೆ ಹೋಗಿಲ್ಲ : ಸಚಿವ ಪರಮೇಶ್ವರ್‌ ಸ್ಪಷ್ಟನೆ

ನಾನು ಎಬಿವಿಪಿ ಕಾರ್ಯಕ್ರಮಕ್ಕೆ ಹೋಗಿಲ್ಲ : ಸಚಿವ ಪರಮೇಶ್ವರ್‌ ಸ್ಪಷ್ಟನೆ

I did not go to ABVP program: Minister Parameshwar clarifies

ಬೆಂಗಳೂರು, ಸೆ.11– ರಾಜಕೀಯದಲ್ಲಿ ತಮಗೂ ಶತ್ರುಗಳಿದ್ದು, ಕ್ಷುಲ್ಲಕ ವಿಚಾರಗಳಿಗೆ ಅಪಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ತಾವು ಎಬಿವಿಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 35 ವರ್ಷಗಳಿಂದಲೂ ರಾಜಕೀಯ ಜೀವನದಲ್ಲಿದ್ದೇನೆ. ನನಗೆ ಸೈದ್ಧಾಂತಿಕ ಬದ್ಧತೆ ಇದೆ.

ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ನಾನು ನಿಜವಾದ ಕಾಂಗ್ರೆಸಿಗ, ಕಾಂಗ್ರೆಸಿಗನಾಗಿಯೇ ಸಾಯುತ್ತೇನೆ ಎಂದಿದ್ದಾರೆ. ತುಮಕೂರಿನಲ್ಲಿ ರಾಣಿ ಅಬ್ಬಕ್ಕ ಅವರ ಮೆರವಣಿಗೆ ನಡೆದಿತ್ತು. ಅಬ್ಬಕ್ಕ ದೇವಿಗೆ ಹೂವಿನಹಾರ ಹಾಕಿ ಎಂದು ಮನವಿ ಮಾಡಿಕೊಂಡರು. ತಮೊಂದಿಗೆ ತಿಪಟೂರಿನ ಶಾಸಕ ಷಡಕ್ಷರಿ ಕೂಡ ಇದ್ದರು.

ತಾವು ಕಾರಿನಿಂದ ಇಳಿದು ರಾಣಿ ಅಬ್ಬಕ್ಕ ದೇವಿಗೆ ಪುಷ್ಪ ನಮನ ಸಲ್ಲಿಸಿದ್ದೇನೆ ಅದರ ಹೊರತಾಗಿ ಎಬಿವಿಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇದನ್ನು ವಿವಾದ ಮಾಡುವುದಾದರೆ ಮಾಡಿಕೊಳ್ಳಲಿ, ಅದರಿಂದ ನನಗೇನು ತೊಂದರೆ ಇಲ್ಲ ಎಂದಿದ್ದಾರೆ.

ಪರಮೇಶ್ವರ್‌ ಏನು ಎಂದು ರಾಜ್ಯದ ಜನರಿಗೆ ಗೊತ್ತಿದೆ. ಇಂತಹ ಕೀಳು ಮಟ್ಟದ ತಂತ್ರಗಾರಿಕೆಗಳನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷದ ಒಳಗೆ ಹಾಗೂ ಹೊರಗೆ ಇರುವವರು ಅಪಪ್ರಚಾರ ಮಾಡುವುದು ಸಾಮಾನ್ಯ. ನಾನು ಏನು ಎಂದು ಪದೇ ಪದೇ ಸಾಬೀತು ಪಡಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್‌‍ ಠಾಣೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದ್ವೇಷ ಭಾಷಣ ಮಾಡಿದ್ದಾರೆ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಅಗತ್ಯ ಕ್ರಮಕೈಗೊಳ್ಳುತ್ತಾರೆ ಎಂದರು.
ಮದ್ದೂರು ಈಗ ಶಾಂತಿಯುತವಾಗಿದೆ. ಕಲ್ಲು ತೂರಾಟ ನಡೆಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಮಾರನೇ ದಿನ ಕೂಡ ಪ್ರತಿಭಟನೆಗಳನ್ನು ಚಿತ್ರೀಕರಿಸಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗವುದು ಎಂದು ಅವರು ತಿಳಿಸಿದರು.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಅವೈಜ್ಞಾನಿಕವಾಗಿ ಇದೆ ಎಂದು ಆರೋಪಿಸಿ ಕೆಲ ಜಾತಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಮುಖ್ಯಮಂತ್ರಿಗಳ ಗಮನಕ್ಕಿದೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಲೆಕ್ಕಾಚಾರಗಳನ್ನೂ ಮಾಡಿಯೇ ಮೀಸಲಾತಿ ವರ್ಗೀಕರಣ ಮಾಡಿದೆ. ಇದಕ್ಕೆ ಕೆಲವರು ಒಪ್ಪಿಲ್ಲ ಎಂದು ಹೇಳಲಾಗುತ್ತಿದ್ದು, ಅತಹವರು ಪ್ರತಿಭಟನೆ ಮಾಡುತ್ತಿದ್ದಾರೆ, ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಬಹುದು. ಇಂತಹ ವಿಚಾರಗಳಲ್ಲಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ, ಮುಖ್ಯಮಂತ್ರಿ ಅವರು ಎಲ್ಲರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರಗಳ ಬದಲಾಗಿ ಮತಪತ್ರಗಳನ್ನು ಬಳಸುವುದು ಸಂಪುಟದ ತೀರ್ಮಾನ. ಈ ಸಂಬಂಧಪಟ್ಟಂತೆ ಸುಗ್ರೀವಾಜ್ಞೆ ಕೂಡ ಹೊರಡಿಸಲಾಗುವುದು. ಅ ನಂತರದ ಬೆಳವಣಿಗೆಗಳನ್ನು ಕಾದು ನೋಡುತ್ತೇವೆ ಎಂದರು.

RELATED ARTICLES

Latest News