ಮೈಸೂರು,ಸೆ.8- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಿಂದ ಒಂದೇ ದಿನ 848 ನಿವೇಶನಗಳು ಹಂಚಿಕೆಯಾಗಿರುವ ಮಾಹಿತಿ ತಮಗೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ದಿನ ಇಷ್ಟೊಂದು ನಿವೇಶನಗಳು ಹಂಚಿಕೆಯಾಗಿರುವುದು ನನಗೆ ಹೊಸ ವಿಚಾರ. ಮುಡಾ ಪ್ರಕರಣದಲ್ಲಿ ತನಿಖೆಗೆ ನ್ಯಾಯಾಂಗ ಆಯೋಗ ರಚನೆಯಾದ ಮೇಲೆ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಏನೇ ಇದ್ದರೂ ಆಯೋಗವೇ ವಿಚಾರಣೆ ನಡೆಸಬೇಕು. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
2022 ರಲ್ಲಿ ಆಗಿನ ಮುಡಾ ಅಧ್ಯಕ್ಷರಾಗಿದ್ದ ರಾಜೀವ್ ಅವರು ಒಂದೇ ದಿನ 848 ನಿವೇಶನಗಳನ್ನು ಹಂಚಿಕೆ ಮಾಡಿರುವುದು ನನಗೆ ತಿಳಿದಿಲ್ಲ. ಈ ಬಗ್ಗೆ ಕಾರ್ಯದರ್ಶಿಗಳಿಗೆ ಪತ್ರ ರವಾನೆಯಾಗಿದ್ದರೆ ಅದನ್ನು ಪರಿಶೀಲಿಸಲಾಗುವುದು ಎಂದರು.ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರ ಅಮಾನತಿಗೆ ಆಂತರಿಕ ವಿಚಾರಣಾ ವರದಿ ಕಾರಣ. ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರು ಸುದೀರ್ಘ ವಿಚಾರಣೆ ನಡೆಸುತ್ತಿದ್ದರು.
ಮೂಲಗಳ ಪ್ರಕಾರ, ಲಕ್ಷಾಂತರ ಪುಟಗಳಿದ್ದು, ಆ ಎಲ್ಲಾ ಪುರಾವೆಗಳನ್ನೂ ಪರಿಶೀಲಿಸಲಾಗುತ್ತಿದೆ. ಮುಡಾ ಹಗರಣವನ್ನು ಇಂಚಿಂಚಾಗಿ ಪರಿಶೀಲಿಸಲಾಗುತ್ತಿದೆ. ವರದಿ ಬಂದ ಬಳಿಕ ಹಿಂದಿನ ಆಯುಕ್ತರಾಗಿದ್ದವರೂ ಸೇರಿದಂತೆ ಹಲವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ. ವಿರೋಧಪಕ್ಷಗಳ ಕನಸುಗಳು ನನಸಾಗುವುದಿಲ್ಲ ಎಂದು ಭೈರತಿ ಸುರೇಶ್ ಹೇಳಿದರು.
ಪಿ.ಎನ್.ದೇಸಾಯಿ ಅವರ ಸಮಿತಿ ಮುಡಾದ ಹಗರಣವನ್ನು ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ತಾವು ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲ. ಯಾವುದೇ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ. ಅದು ಬೇರೆಯದೇ ಸ್ವರೂಪ ಪಡೆದುಕೊಳ್ಳುತ್ತದೆ. ವಿರೋಧಪಕ್ಷಗಳು ಅದನ್ನೇ ನೆಪ ಮಾಡಿಕೊಂಡು ಟೀಕೆ ಮಾಡುತ್ತವೆ. ಅದಕ್ಕಾಗಿ ನ್ಯಾಯಾಂಗದ ವರದಿ ಬರುವವರೆಗೂ ಮುಡಾ ಹಗರಣದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಫೆಬ್ರವರಿ 6 ಮತ್ತು 7 ರಂದು ನನ್ನ ಮಗನ ಮದುವೆಯಿದೆ. ಅದಕ್ಕಾಗಿ ಮೈಸೂರಿನ ಚಾಮುಂಡಿ ಹಾಗೂ ನಂಜನಗೂಡು ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದಿದ್ದೇವೆ ಎಂದು ಹೇಳಿದರು.