ರಾಮನಗರ.ಜು.8– ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು, ನನಗೆ ಸಚಿವ ಸ್ಥಾನ ಬೇಡ ಎಂದು ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯ ಜನ ಹಾಗೂ ಶಾಸಕರ ಅಭಿಪ್ರಾಯ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದಾಗಿದೆ. ಈ ವಿಚಾರವಾಗಿ ಹೈಕಮಾಂಡ್ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದರು.
ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದ. ಹೈಕಮಾಂಡ್ ಮಟ್ಟದಲ್ಲಿ ಯಾವ ರೀತಿಯ ಒಡಂಬಡಿಕೆಯಾಗಿದೆ ಎಂಬುದು ನಮಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಸೇರಿ 6 ತಿಂಗಳಾಗಿವೆ. ಪಕ್ಷದ ಚಟುವಟಿಕೆಗಳಲ್ಲಿ ನಾನು ಹೆಚ್ಚು ಸಕ್ರಿಯವಾಗಿಲ್ಲ. ರಾಜಕಾರಣ ಮಾಡಲು ಹೋಗುತ್ತಿಲ್ಲ. ಕ್ಷೇತ್ರದಲ್ಲಿ ನುಸಿಪೀಡೆ ಸೇರಿದಂತೆ ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಎಚ್.ಸಿ.ಬಾಲಕೃಷ್ಣ ಆಕಾಂಕ್ಷಿಯಾಗಿದ್ದಾರೆ. ಮೊದಲು ಅವರಿಗೆ ಅವಕಾಶ ಸಿಗಲಿ. ನಾನೇನೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ನಮ್ಮ ಮೊದಲ ಬಯಕೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವ ಬಗ್ಗೆಯಾಗಲೀ, ಅವರನ್ನು ಹಿಂದುಳಿದ ವರ್ಗಗಳ ಘಟಕದ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸುವ ಬಗ್ಗೆಯಾಗಲೀ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ನನಗೆ ಹಳೆಯ ಪಕ್ಷ. ಆದರೆ ರಾಜ್ಯ ರಾಜಕಾರಣದಲ್ಲಿ ನನಗೆ ಹೆಚ್ಚಿನ ಸಕ್ರಿಯತೆ ಇಲ್ಲ. ಶಾಸಕರ ಜೊತೆ ಚರ್ಚೆ ಮಾಡುವುದಾಗಲೀ, ಯಾರು, ಯಾವ ಹುದ್ದೆಗೆ ನೇಮಕವಾಗುತ್ತಿದ್ದಾರೆ ಎಂಬೆಲ್ಲಾ ವಿಚಾರಗಳ ಬಗ್ಗೆ ಗಮನ ಕೊಡುತ್ತಿಲ್ಲ.
ಇನ್ನೂ 2-3 ತಿಂಗಳು ಕಳೆಯಲಿ. ಆ ಬಳಿಕ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು. ಕಣ್ಣ ನದಿಪಾತ್ರದಲ್ಲಿ ಮರಳು ಗಣಿಗಾರಿಕೆ ಶುರುವಾಗಿರುವ ಬಗ್ಗೆ ಮಾಹಿತಿ ಇದೆ. ಇದರಿಂದಾಗಿಯೇ ನದಿಪಾತ್ರ ಒಂದಕ್ಕೆ ಮೂರರಷ್ಟು ಹೆಚ್ಚಾಗಿದೆ. ನಾನು ಮೊದಲಿನಿಂದಲೂ ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸಿದ್ದೇನೆ. ತಾಲ್ಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸರು ಮರಳು ಗಣಿಗಾರಿಕೆಯನ್ನು ತಡೆಯಬೇಕು ಎಂದು ಸೂಚಿಸಿದರು.
- ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಹಿತ ಮರೆತ ಡಿಎಂ-ಡಿಸಿಎಂ : ಬೊಮ್ಮಾಯಿ
- ಸರ್ಕಾರದ ವಿರುದ್ಧ ಸಿಡಿದೆದ್ದು ಬೀದಿಗಿಳಿದ 25 ಸಾವಿರ ಮಹಾನಗರ ಪಾಲಿಕೆ ನೌಕರರು
- ಟೆಕ್ಸಾಸ್ ಪ್ರವಾಹಕ್ಕೆ 100 ಮಂದಿ ಬಲಿ
- ಪ್ರಿಯತಮನೊಂದಿಗೆ ಸೇರಿ ಪತಿ ಕೊಂದಿದ್ದ ಪತ್ನಿ : ಸಾಕ್ಷಿ ಹೇಳಿದ 3 ವರ್ಷದ ಮಗು
- ರೈಲ್ವೆ ಪ್ಲಾಟ್ಫಾರ್ಮ್ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಯೋಧನಿಗೆ ಸೇನೆ ಶ್ಲಾಘನೆ