ಹಾಸನ, ಜು.6– ಹಾಸನ ಜಿಲ್ಲೆಯ ಉಸ್ತುವಾರಿ ಬೇಡ ಎಂದು ಕಳೆದ ಡಿಸೆಂಬರ್‌ನಲ್ಲೇ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಿದ್ದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಸನ ಜಿಲ್ಲೆಗೆ ತಾವು ಕಳೆದ 2 ತಿಂಗಳಿನಿಂದ ಭೇಟಿ ನೀಡಿರಲಿಲ್ಲ. ಅದಕ್ಕೆ ಮೂಲ ಕಾರಣ ನನ್ನ ಆರೋಗ್ಯದ ಸಮಸ್ಯೆ. ನನ್ನ ಕಣ್ಣಿನಲ್ಲಿ ಸಮಸ್ಯೆ ಉಂಟಾಗಿತ್ತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೊದಲ ಬಾರಿ ಭೇಟಿ ನೀಡಿದ ವೇಳೆ ಕುಣಿಗಲ್‌ನಲ್ಲಿ ಪಟಾಕಿ ಹೊಡೆದಿದ್ದರು. ಅದರಿಂದಾಗಿ ರೆಟಿನಾಗೆ ಹಾನಿಯಾಗಿದೆ.
ಜನ ಹತ್ತಿರವಿದ್ದರೂ ಸಹ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಮಂಗಳೂರಿನಲ್ಲಿ ಪರೀಕ್ಷೆ ನಡೆಸಿದಾಗ ಸಮಸ್ಯೆ ತಿಳಿದುಬಂದಿತು. ಅದಕ್ಕೆ ಚಿಕಿತ್ಸೆ ಇಲ್ಲ, ರೆಟಿನಾಗೆ ಗ್ಯಾಸ್ ತುಂಬಿಸುತ್ತಾರೆ ಎಂದು ವೈದ್ಯರು ಹೇಳಿದರು. ಕಳೆದ 23 ರಂದು ಕಣ್ಣಿನ ಆಪರೇಷನ್ ಮಾಡಿಸಿದ್ದೇನೆ. 40 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈಗ ಭೇಟಿ ನೀಡುತ್ತಿದ್ದೇನೆ. ಇದು ಹಾಸನಕ್ಕೆ ಭೇಟಿ ನೀಡದೇ ಇರಲು ಪ್ರಮುಖ ಕಾರಣ ಎಂದರು.
ಬೇರೆ ಕಾರಣಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ಬೇಡ ಎಂದು ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದರೂ ಅವರು ಕ್ರಮ ಕೈಗೊಂಡಿಲ್ಲ, ಹಾಗೆಂದು ನಾನು ಜವಾಬ್ದಾರಿಯಿಂದ ಹಿಂದೆ ಸರಿಯುವಂತಿಲ್ಲ, ನನ್ನ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಹಾಸನದಲ್ಲಿ ಹೃದಯಾಘಾತದ ಹೆಸರಿನಲ್ಲಿ ಭಯ ಸೃಷ್ಟಿಸಲಾಗುತ್ತಿದೆ. ಟ್ರ್ಯಾಕ್ಟರ್‌ನಿಂದ ಬಿದ್ದು ಮೃತಪಟ್ಟಿದ್ದರೂ ಅದನ್ನು ಹೃದಯಾಘಾತ ಎಂದು ಬೆದರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಅಸತ್ಯಗಳು ಜನರನ್ನು ಭಯ ಬೀಳಿಸುತ್ತಿವೆ ಎಂದರು.
ಜಿಲ್ಲೆಯಲ್ಲಿ 22 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಲ್ಲಿ 4 ಜನರ ಶವಗಳನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗಿದೆ. ಅದರ ವರದಿ ಕೂಡ ಬಂದಿದೆ. ಅವರಿಗೆ ಹೃದಯಾಘಾತವಾಗಿರುವುದು ಖಚಿತವಾಗಿದೆ. ಉಳಿದ ಸಾವುಗಳು ಹೃದಯಾಘಾತದಿಂದಲೇ ಆಗಿದೆ ಎಂಬುದು ನಮ್ಮ ಊಹೆ. ಆದರೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದರು.
ಕೋವಿಡ್ ನಿರೋಧಕ ಲಸಿಕೆಗೂ, ಹೃದಯಾಘಾತಕ್ಕೂ ಸಂಬಂಧ ಇಲ್ಲ ಎಂದು ಕಂಡುಬರುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಹೇಳಿಕೆಗಳು ರಾಜ್ಯಸರ್ಕಾರ ರಚಿಸಿದ ಸಮಿತಿಯ ಅಭಿಪ್ರಾಯಗಳನ್ನು ನೋಡಿದರೆ ಲಸಿಕೆಗೂ, ಹೃದಯಾಘಾತಕ್ಕೂ ಸಂಬಂಧ ಇದ್ದಂತಿಲ್ಲ, ಆದರೆ ನಿಖರ ಕಾರಣಗಳನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದರು.
ಮೊದಲು ಆಸ್ಪತ್ರೆಗಳಿಗೆ ಜನರೇ ಹೋಗುತ್ತಿರಲಿಲ್ಲ. ಈಗ ರಾತ್ರಿ 10 ಗಂಟೆಯಾದರೂ ಜನ ತುಂಬಿ ತುಳುಕುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಹೃದಯ ತಪಾಸಣೆ ವ್ಯವಸ್ಥೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗುವವರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಲ್ಲಿ ಹೃದಯ ತಪಾಸಣೆ ನಡೆಸಲಾಗುತ್ತದೆ. ಈಗ ಸಾವುಗಳಾಗಿರುವ ಪೈಕಿ 3 ಜನ ಮಾತ್ರ 50 ವರ್ಷ ಮೇಲ್ಪಟ್ಟವರಿದ್ದಾರೆ. ಉಳಿದವರು 40 ವರ್ಷ ಒಳಗಿನವರಿದ್ದಾರೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾರ್ವತ್ರಿಕ ತಪಾಸಣೆ ನಡೆಸಲು ಚಿಂತನೆ ನಡೆದಿದೆ ಎಂದರು.
ಹಾಸನ ಜಿಲ್ಲೆಯಂತೆ ಬೇರೆ ಜಿಲ್ಲೆಗಳಲ್ಲೂ ಹೃದಯಾಘಾತವಾಗುತ್ತಿದೆ. ಸತ್ಯ ತಿಳಿದು ವರದಿ ಮಾಡಿದರೆ ನನ್ನ ಅಭ್ಯಂತರವಿಲ್ಲ. ಆದರೆ ಸುಳ್ಳು ಮಾಹಿತಿಗಳು ಸರಿಯಲ್ಲ ಎಂದು ಹೇಳಿದರು.
ಡಾ.ಸಿ.ಎನ್.ಮಂಜುನಾಥ್ ಹಾಗೂ ಪ್ರಸ್ತುತ ಜಯದೇವ ಸಂಸ್ಥೆಯ ನಿರ್ದೇಶಕರ ಅಭಿಪ್ರಾಯಗಳನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಪೂರಕವಾಗಿ ಸ್ಥಳೀಯವಾಗಿ ಅಧ್ಯಯನವಾಗುತ್ತದೆ. ವರದಿ ಬಂದ ನಂತರ ನೈಜ ಕಾರಣವನ್ನು ಜನರಿಗೆ ತಿಳಿಸಲು ಸಾಧ್ಯವಾಗುತ್ತದೆ. ಅದಕ್ಕೂ ಮುನ್ನ ಕೋವಿಡ್ ಲಸಿಕೆಯಿಂದ ಹೃದಯಾಘಾತವಾಗುತ್ತಿದೆ ಎಂಬುದೂ ಸೇರಿದಂತೆ ನಾನಾ ರೀತಿಯ ವದಂತಿಗಳನ್ನು ಹರಡುತ್ತಿರುವುದು ಸರಿಯಲ್ಲ ಎಂದರು.
ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮತ್ತೊಮ್ಮೆ ಕುತೂಹಲದ ಮಾಹಿತಿ ನೀಡಿದ ಅವರು, ಎಲ್ಲಾ ವಿಚಾರಗಳನ್ನು ಈಗಲೇ ಹೇಳಿದರೆ ಕುತೂಹಲ ಇರುವುದಿಲ್ಲ. ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಬಂದು ಸಭೆ ಮಾಡಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅದರಲ್ಲೇನೂ ವಿಶೇಷ ಇಲ್ಲ. ಎರಡು ತಿಂಗಳ ಕಾಲಾವಕಾಶ ಇದೆ. ಅಷ್ಟರಲ್ಲಿ ದೇಶವನ್ನೇ ತಲೆಕೆಳಗು ಮಾಡಬಹುದು.
ಈಗಲೇ ಎಲ್ಲಾ ವಿವರಣೆಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದರು.ಬಹಳಷ್ಟು ಮಂದಿ ವೈಯಕ್ತಿಕವಾಗಿ ಹೇಳಿಕೆಗಳನ್ನು ನೀಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯಗಳೂ ಕೂಡ ಬಹಳಷ್ಟಿವೆ. ಅವು ಸರಿಯೋ, ಇಲ್ಲವೋ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದರು.
- ಶಿವಮೊಗ್ಗದಲ್ಲಿ ಗಣೇಶ ಮೂರ್ತಿಗೆ ಕಾಲಿನಿಂದ ಒದ್ದು, ನಾಗನ ವಿಗ್ರಹ ಚರಂಡಿಗೆಸೆದು ವಿಕೃತಿ ಮೆರೆದ ಕಿಡಿಗೇಡಿಗಳು : ಭಾರಿ ಆಕ್ರೋಶ
- ನಿವೃತ್ತ CJI ಚಂದ್ರಚೂಡ್ ವಾಸವಿರುವ ನಿವಾಸವನ್ನು ತಕ್ಷಣವೇ ನಿವಾಸ ಖಾಲಿ ಮಾಡಿಸುವಂತೆ ಕೇಂದ್ರಕ್ಕೆ ಸುಪ್ರೀಂ ಪತ್ರ
- ಇಸ್ರೇಲ್-ಇರಾನ್ ಯುದ್ಧದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿ ಖಮೇನಿ
- ದಲೈಲಾಮಾ ಅವರ 90ನೇ ಹುಟ್ಟುಹಬ್ಬ : ಶುಭಾಶಯ ಕೋರಿದ ಪ್ರಧಾನಿ ಮೋದಿ
- ತುಮಕೂರು : ಖಾಸಗಿ ಹೋಟೆಲ್ನಲ್ಲಿ ದಾವಣಗೆರೆಯ ಪಿಎಸ್ಐ ಆತ್ಮಹತ್ಯೆ