ಮೈಸೂರು ,ಆ.2- ಮುಡಾ ನಿವೇಶನ ಹಂಚಿಕೆಯಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ರಾಜ್ಯಪಾಲರ ನೋಟಿಸ್‌ಗೆ ಏಕೆ ಹೆದರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ರಾಜ್ಯಪಾಲರು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್‌ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಡಾ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ.
ಆದರೂ ಶೋಕಾಸ್ ನೋಟಿಸ್ ನೀಡುವ ಮೂಲಕ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು. ರಾಜ್ಯಪಾಲರು ನೋಟಿಸ್ ನೀಡಿದ ತಕ್ಷಣ ಸಿದ್ದರಾಮಯ್ಯ ಹೆದರಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಹುಶಃ ಅಶೋಕ್ ಹೆದರಿರಬಹುದು. ನಾನೇಕೆ ಹೆದರಬೇಕು? ನಾನು ಯಾವುದೇ ತಪ್ಪು ಮಾಡಿಲ್ಲ. ಅಂದಮೇಲೆ ಭಯಪಡುವ ಅಗತ್ಯವಿಲ್ಲ. ರಾಜ್ಯಪಾಲರು ಕಾನೂನಿನ ರೀತಿ ನಡೆದುಕೊಂಡಿಲ್ಲ ಎಂದು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ನಿನ್ನೆ ಶೋಕಾಸ್ ನೋಟಿಸ್ ಬಗ್ಗೆ ಚರ್ಚೆ ನಡೆಸಿ, ಕಾನೂನು ಬಾಹಿರವಾದ ನೋಟಿಸ್‌ನ್ನು ಹಿಂಪಡೆಯಬೇಕೆಂದು ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ದೂರು ನೀಡಿರುವ ಟಿ.ಜೆ.ಅಬ್ರಹಾಂ ಬ್ಲಾಕ್‌ಮೇಲರ್ ವ್ಯಕ್ತಿ. ಈ ರೀತಿ ಹಲವು ಜನರ ವಿರುದ್ಧ ದೂರು ನೀಡಿದ್ದಾನೆ. ನಾನು ಜನರಿಂದ ಚುನಾಯಿತರಾದ 136 ಶಾಸಕರ ಪ್ರತಿನಿಧಿಯಾದ ಮುಖ್ಯಮಂತ್ರಿ. ನನಗೆ ಶೋಕಾಸ್ ನೋಟಿಸ್ ನೀಡುವಾಗ ಕಾನೂನಾತಕ ಅಂಶಗಳ ಸಮಗ್ರ ಪರಿಶೀಲನೆ ನಡೆಯಬೇಕು. ಆದರೆ ಅದಾವುದೂ ಇಲ್ಲದೇ ಆತುರವಾಗಿ ನೋಟಿಸ್ ನೀಡಲಾಗಿದೆ ಎಂದು ದೂರಿದರು.
ಅಬ್ರಹಾಂ ಬೆಳಗ್ಗೆ 11.30ಕ್ಕೆ ದೂರು ನೀಡಿದ್ದಾರೆ. ಅದೇ ದಿನ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಸುದೀರ್ಘ ವಿವರಣೆ ನೀಡಿ ಲಿಖಿತ ಉತ್ತರ ನೀಡಿದ್ದಾರೆ.ಇದಾವುದನ್ನೂ ರಾಜ್ಯಪಾಲರು ಗಮನಿಸಿಲ್ಲ.
ದೂರು ಬಂದ ದಿನ ರಾತ್ರಿ 10 ಗಂಟೆಗೆ ರಾಜ್ಯಪಾಲರ ಕಾರ್ಯದರ್ಶಿ ಪ್ರಭುಲಿಂಗ ಸ್ವಾಮಿ ಅವರು ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ಕರೆ ಮಾಡಿ ಶೋಕಾಸ್ ನೋಟಿಸ್ ಸಿದ್ಧವಿದೆ ತೆಗೆದುಕೊಳ್ಳಿ ಎಂದಿದ್ದಾರೆ. ರಾತ್ರಿಯಾಗಿದ್ದಕ್ಕೆ ಅಂದು ನೋಟಿಸ್ ಸ್ವೀಕರಿಸಿಲ್ಲ. ಮಾರನೇ ದಿನ ಬೆಳಗ್ಗೆ 2 ಗಂಟೆಗೆ ನೋಟಿಸ್ ಕೊಟ್ಟಿದ್ದಾರೆ.ಇದೇ ರೀತಿ ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರ ಮುಂದೆ ಹಲವಾರು ದೂರುಗಳಿವೆ. ಬಿಜೆಪಿಯ ಶಾಸಕರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ, ಅವರ ವಿರುದ್ಧದ ದೂರುಗಳು ಹಲವಾರು ವರ್ಷಗಳಿಂದ ಬಾಕಿ ಇವೆ. ಅವುಗಳ ವಿಚಾರದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ. ಕಾನೂನು ಬಾಹಿರವಾಗಿ ಸಂವಿಧಾನಕ್ಕೆ ವಿರುದ್ಧವಾದ ನಡವಳಿಕೆಯನ್ನು ಅನುಸರಿಸಲಾಗಿದ್ದು, ಪ್ರಜಾಪ್ರಭುತ್ವವನ್ನು ನಾಶ ಮಾಡುವ ಹುನ್ನಾರವಾಗಿದೆ. ನನ್ನ ಪಾತ್ರ ಇಲ್ಲದೇ ಇದ್ದರೂ ಅನಗತ್ಯವಾಗಿ ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಪುಟದ ಸಲಹೆ ಮೇರೆಗೆ ರಾಜ್ಯಪಾಲರು ಕೆಲಸ ಮಾಡಬೇಕು. ಈ ವಿಚಾರವಾಗಿ ಸಂಪುಟದ ಸಲಹೆ ಕೇಳಿಲಿಲ್ಲ. ನಾವು ನೀಡಿಲ್ಲ. ಆದರೂ ನೋಟಿಸ್ ಕೊಟ್ಟಿದ್ದೇಕೆ? ಮುಡಾ ನಿವೇಶನ ಹಂಚಿಕೆ ಹಗರಣಗಳನ್ನು ತನಿಖೆ ನಡೆಸಲು ಜು.14ರಂದು ನ್ಯಾಯಾಂಗ ಆಯೋಗ ರಚಿಸಲಾಗಿದೆ. ಅದರ ವರದಿ ಬಂದಿಲ್ಲ ಎಂದು ತಿಳಿಸಿದರು.
ಜೆಡಿಎಸ್-ಬಿಜೆಪಿ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಆರಂಭದಲ್ಲಿ ಈ ಪ್ರಕರಣದಲ್ಲಿ ಏನೂ ಇಲ್ಲ ಪಾದಯಾತ್ರೆ ಬೇಡ ಎಂದು ಕುಮಾರಸ್ವಾಮಿ ಹೇಳಿದರು.ರಾಜ್ಯದಲ್ಲಿ ಮಳೆಯಾಗುತ್ತಿದೆ. ಪ್ರವಾಹ ಪರಿಸ್ಥಿತಿಯಿಂದ ಜನರು ಸಂಕಷ್ಟದಲ್ಲಿದ್ದಾರೆ.
ಈಗ ಪಾದಯಾತ್ರೆ ಏಕೆ ಎಂದು ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರು. ಈಗ ಅವರು ಪಾದಯಾತ್ರೆಗೆ ಹೋಗುತ್ತಿರುವುದು ಸ್ವ ಇಚ್ಛೆಯಿಂದಲ್ಲ ಎಂದರು. ಬಿಜೆಪಿ-ಜೆಡಿಎಸ್ ಪಕ್ಷಗಳು ಏನೇ ಹುನ್ನಾರ ನಡೆಸಿದರೂ ಅದನ್ನು ಎದುರಿಸಲು ನಾವು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.