ಬೆಂಗಳೂರು,ಜೂ.22- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಾದರೂ ಸ್ಪರ್ಧಿಸಲಿ, ಅವರೊಂದಿಗೆ ಇನ್ನೂ ನಾಲ್ಕು ಜನ ಕರೆದುಕೊಂಡು ಸ್ಪರ್ಧೆ ಮಾಡಲಿ ತಮ್ಮದೇನೂ ಅಭ್ಯಂತರವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ದೊಡ್ಡ ಮಹತ್ವ ಕೊಡುವುದು ಬೇಡ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು ಎಂದರು.
ಉಪಚುನಾವಣೆಯಲ್ಲಿ ಯಾರನ್ನಾದರೂ ನಾವು ನಿಲ್ಲಬೇಡಿ ಎಂದು ಹೇಳಲು ಆಗುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರಾಗಲಿದ್ದಾರೆ ಎಂಬುದನ್ನು ಕಾಲವೇ ನಿರ್ಧಾರ ಮಾಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.ಉಪಚುನಾವಣೆ ವಿಚಾರಕ್ಕೆ ಈಗ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸೋಣ ಎಂದು ಹೇಳಿದರು.
ನಿರಾಕರಣೆ:
ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಕುಮಾರಸ್ವಾಮಿ ನಿರಾಕರಿಸಿದರು. ಇಂಥ ವಿಚಾರಗಳನ್ನು ನನ್ನ ಬಳಿ ಚರ್ಚೆ ಮಾಡಲು ಬರಬೇಡಿ. ರಾಜ್ಯದ ಸಮಸ್ಯೆಗಳಿಗೆಸಂಬಂಧಪಟ್ಟ ವಿಚಾರಣಗಳನ್ನು ಮಾತ್ರ ಚರ್ಚೆಮಾಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಈಗ ಆ ಪ್ರಕರಣದ ಅವಶ್ಯಕತೆ ಏನಿದೆ? ರಾಜ್ಯದಲ್ಲಿ ಕಾನೂನು ಇದೆ. ಕಾನೂನಡಿ ಎಲ್ಲವೂ ನಡೆಯಲಿದೆ. ಯಾಕೆ ಈ ರೀತಿ ಆರೋಪ ಪ್ರಕರಣ ಬರುತ್ತಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇಂಥ ಪ್ರಶ್ನೆಗಳನ್ನು ಕೇಳಬೇಡಿ ಎಂದು ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಗರಮಾದರು.