ಬೆಂಗಳೂರು,ಮಾ.24– ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಕೇಂದ್ರ ಸಚಿವ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ತಿರುಚುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ವಿರುದ್ಧ ನಾನು ನ್ಯಾಯಾಂಗ ಹೋರಾಟ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಜೆ.ಪಿ.ನಡ್ಡಾ ಅವರಿಗಿಂತಲೂ ನಾನು ಸೂಕ್ಷ್ಮ ಹಿರಿಯ ರಾಜಕಾರಣಿ. 36 ವರ್ಷಗಳಿಂದಲೂ ನಾನು ಶಾಸನ ಸಭೆಯಲ್ಲಿದ್ದೇನೆ. ಕನಿಷ್ಠ ಸಾಮಾನ್ಯ ಪ್ರಜ್ಞೆ ನನಗಿದೆ. ತೀರ್ಪುಗಳಲ್ಲಿ ಹಲವರ ತೀರ್ಪುಗಳಿವೆ.ಹಿಂದುಳಿದ ವರ್ಗಗಳ ಮೀಸಲಾತಿ ವಿಷಯದಲ್ಲಿ ಹಲವಾರು ನಿರ್ಧಾರಗಳಾಗಿವೆ. ನಾವು ಸಂವಿಧಾನವನ್ನು ಉಲ್ಲಂಘನೆ ಮಾಡಿಲ್ಲ. ರಾಷ್ಟ್ರೀಯ ಪಕ್ಷವಾಗಿ ನಮಗೆ ಸಂವಿಧಾನದ ರಕ್ಷಣೆ ಬಗ್ಗೆ ಬದ್ಧತೆಯಿದೆ ಎಂದರು.
ಸಂವಿಧಾನ ಬದಲಾವಣೆ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಮೀಸಲಾತಿಯ ವಿಷಯದಲ್ಲಿ ಅನೇಕ ತೀರ್ಪುಗಳಾಗಿವೆ. ಅದರ ಆಧಾರದ ಮೇಲೆ ಅನೇಕ ಬಾರಿ ಸಂವಿಧಾನ ತಿದ್ದುಪಡಿ ಬಹಳಷ್ಟು ಬಾರಿಯಾಗಿದೆ ಎಂದು ಹೇಳಿದ್ದೇನೆ. ಅದನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ಹಾಗೂ ನನ್ನ ಪಕ್ಷದ ವಿರುದ್ಧ ಬಿಜೆಪಿ ರಾಜಕೀಯ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ಎಲ್ಲದರಲ್ಲೂ ರಾಜಕೀಯ ಮಾಡುವ ದುರುದ್ದೇಶವಿದೆ. ನ್ಯಾಯಾಲಯದ ತೀರ್ಪುಗಳ ಮೇಲೆ ಹಿಂದುಳಿದ ವರ್ಗಗಳ ಮೀಸಲಾತಿ ಜಾರಿಯಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಮೊದಲು ಸಂವಿಧಾನ ತಿದ್ದುಪಡಿಯಾಗಿದೆ ಎಂದು ಹೇಳಿದ್ದೇನೆಯೇ ಹೊರತು ಮುಂದೆ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿಲ್ಲ. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಿರುಚಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರಿಗೆ ಹೇಳಿಕೆಗಳನ್ನು ತಿರುಚುವುದೇ ಉದ್ಯೋಗ.
ಅವರಿಗೆ ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಹೇಳಿಕೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಶತಮೂರ್ಖತನ ಮತ್ತು ನಿಯಮಬಾಹಿರ. ಸಂಸತ್‌ನಲ್ಲಿ ಹೇಳಿಕೆ ನೀಡಿರುವುದರಿಂದ ಇದರ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದರು.
ಬಿಜೆಪಿಯವರಿಗೆ ಗಾಂಧಿ ಫ್ಯಾಮಿಲಿಯ ಹೆಸರು ಬಳಸಿಕೊಳ್ಳದೇ ಇದ್ದರೆ ನಿದ್ದೆ ಬರುವುದಿಲ್ಲ, ತಿಂದಿದ್ದು ಜೀರ್ಣವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಮ ವಿರುದ್ಧ ಟೀಕೆ ಮಾಡಲು ಬಿಜೆಪಿಯವರಿಗೆ ಯಾವುದೇ ಅಂಶಗಳಿಲ್ಲ. ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದನ್ನು ಮರೆಮಾಚಲು ಈ ರೀತಿಯ ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.