ಬೆಂಗಳೂರು,ಏ.5 – ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ನನ್ನ ಬಳಿ ಟನ್ ಗಟ್ಟಲೆ ದಾಖಲೆ ಇವೆ. ಸರ್ಕಾರ ಅನಗತ್ಯವಾಗಿ ನನ್ನನ್ನು ಕೆಣಕುವುದು ಒಳ್ಳೆಯದಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ ಸಚಿವರಾಗಿ ಕಬ್ಬಿಣದ ಅದಿರು ಬೇಕು ಎಂದು ಕೇಂದ್ರ ಸಚಿವರಿಗೆ ಶ್ವೇತಪತ್ರ ಬರೆಯಲಾಗಿದೆ. ಯಾವ ದರ್ಜೆಯ ಅದಿರನ್ನು ಲೂಟಿ ಹೊಡೆಯಲಾಗಿದೆ ಎಂಬುದಕ್ಕೆ ನನ್ನ ಬಳಿ ಈಗಲೂ ದಾಖಲೆಗಳಿವೆ ಎಂದು ಹೇಳಿದರು.ಈ ಲೂಟಿಗಾಗಿ ಎಷ್ಟು ಕಂಪನಿಗಳನ್ನು ಸ್ಥಾಪಿಸಲಾಗಿತ್ತು ?, ಅಣ್ಣ-ತಮ್ಮಂದಿರ ಬೇನಾಮಿ ಕಂಪನಿಗಳ ವ್ಯವಹಾರಗಳೇನು?, ಎನ್‌ಟಿಯ ಸೊಸೈಟಿಯ ಹಗರಣಗಳೇನು? ಎಂಬುದೆಲ್ಲಾ ಭಾರೀ ಅವ್ಯವಹಾರಗಳಿವೆ ಎಂದರು.
ಅಲ್ಪಸಂಖ್ಯಾತರಿಗೆ ಶೇ.4 ರಷ್ಟು ಮೀಸಲಾತಿ ನೀಡುವುದನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದಾರೆ. ಆ ಸಮುದಾಯದ ಅಷ್ಟೂ ಮಂದಿ ಗುತ್ತಿಗೆ ಪಡೆದು ಉದ್ಧಾರವಾಗಿದ್ದಾರೆ. ಎಂದು ಶ್ವೇತಪತ್ರದ ಮೂಲಕ ಜನರ ಮುಂದೆ ಮಾಹಿತಿ ಇಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಯಾವುದೇ ವಿಶ್ವಾಸದ ಕೊರತೆಯಿಲ್ಲ. ಪಕ್ಷ ಸಂಘಟನೆ ಸಲುವಾಗಿ ಬಿಜೆಪಿಯವರು ಅವರ ಪಕ್ಷಗಳಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಜೆಡಿಎಸ್ ತನ್ನದೇ ಆದ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಇದರಲ್ಲಿ ಮೈತ್ರಿ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನ ಜನ ನನ್ನ ಮೇಲೆ ವಿಶ್ವಾಸವಿಟ್ಟು ಈ ಬಾರಿ ಜೆಡಿಎಸ್ ಅವಕಾಶ ನೀಡಬೇಕು. ನಮ್ಮ ಪಕ್ಷಕ್ಕೆ 198 ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಕೊರತೆಯಿರಬಹುದು. ಆದರೆ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಜನ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಒಂದು ಟನ್ ಕಸ ಸಾಗಾಣಿಕೆಗೆ 6 ಸಾವಿರ ರೂ. ವೆಚ್ಚದಂತೆ ಟೆಂಡರ್ ಕರೆಯಲಾಗಿತ್ತು. ನಾನು ಇದನ್ನು ಪ್ರಶ್ನಿಸಿದಾಗ ಅಧಿಕಾರಿಗಳು ತಡಬಡಾಯಿಸಿದರು. ಟೆಂಡರ್ ದರವನ್ನು 3 ಸಾವಿರ ರೂ.ಗೆ ಇಳಿಸಿದ್ದಾರೆ. ಹಿಂದೆ ನಾನು ಕಸ
ತೆಗೆಯುವ ಗುತ್ತಿಗೆ ಮಾಡಿದ್ದೆ. ಈಗ ರಾಜ್ಯ ಸರ್ಕಾರದ ಕಸವನ್ನು ತೆಗೆಯುವ ಗುತ್ತಿಗೆ ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಗರಣಗಳನ್ನು ಬಯಲಿಗೆ ತರುತ್ತೇನೆ ಎಂದರು. ತಮಿಳುನಾಡಿನ ಗುತ್ತಿಗೆದಾರರಿಗೆ ಪ್ಯಾಕೇಜ್ ಲೆಕ್ಕದಲ್ಲಿ ಗುತ್ತಿಗೆ ನೀಡಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದು ಇಲ್ಲಿ ವಿವಿಧ ಸಮಾಜಗಳಿಗೆ ಗುತ್ತಿಗೆ ಮೀಸಲಾತಿ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಕಸ ವಿಲೇವಾರಿಯಲ್ಲಿ ದೊಡ್ಡ ಕರ್ಮಕಾಂಡವಿದೆ. ಭಾರೀ ಪ್ರಮಾಣದಲ್ಲಿ ಇದು ನಡೆದಿದ್ದು, ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ರಾಜ್ಯ ಸಂಪದ್ಭರಿತವಾಗಿದ್ದು, ಇವರು ಲೂಟಿ ಮಾಡಿ ಬರಿದು ಮಾಡುತ್ತಿದ್ದಾರೆ. 2-3 ಟ್ರಿಪ್ ಸುಳ್ಳು ಲೆಕ್ಕ ಬರೆದರೆ ಸುಲಭವಾಗಿ ಮನೆ ಬಾಗಿಲಿಗೆ ನಾಲೈದು ಲಕ್ಷ ಸಂಪಾದನೆಯಾಗುತ್ತದೆ. ಅಡ್ಡ ವಸೂಲಿಯಾಗುತ್ತದೆ ಎಂದು ಆರೋಪಿಸಿದರು.
ಒಬ್ಬ ಘೋರಿ ಮಹಮ್ಮದ್, ಇನ್ನೊಬ್ಬ ಘಜ್ಜಿ ಮಹಮ್ಮದ್ ಮತ್ತೊಬ್ಬ ಮಲ್ಲಿಕಾ ಕಪೂರ್‌ನಂತವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಲೂಟಿ ಹೊಡೆಯುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿದ್ದಾರೆ, ರಾಜ್ಯಕ್ಕೆ ಬರಬೇಕು ಎಂದು ಹಲವಾರು ಮಂದಿ ಹೇಳುವುದು ನನ್ನ ಕಿವಿಗೆ ಬಿದ್ದಿದೆ ಎಂದರು.
ಮನೆ ಮುಂದೆ ನಿಲ್ಲಿಸುವ ಬೈಕ್ ಗೂ ಕಾರಿಗೂ ಪಾರ್ಕಿಂಗ್ ಶುಲ್ಕ ಕಟ್ಟಬೇಕು ಎಂಬ ನಿಯಮವನ್ನು ಈ ಸರ್ಕಾರ ನಿಯಮ ತಂದಿದೆ. ಮುಂದೆ ನಿಮ್ಮ ಮನೆಯ ಮಲಗುವ ಕೋಣೆಯವರೆಗೂ ಬಂದು ತೆರಿಗೆ ಹಾಕುತ್ತಾರೆ. ಜನ ಎಚ್ಚೆತ್ತುಕೊಳ್ಳಬೇಕು ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ, ಅದಕ್ಕಾಗಿ ತೆರಿಗೆ ಹಾಕುತ್ತೇವೆ ಎನ್ನುತ್ತಿದ್ದಾರೆ. ಗ್ಯಾರಂಟಿ ಯೋಜನೆ ನೀಡುತ್ತಿರುವುದಕ್ಕೆ ನನ್ನ ಆಕ್ಷೇಪವಿಲ್ಲ.
ಇನ್ನೂ 2 ಸಾವಿರ ಹೆಚ್ಚಿಗೆ ಕೊಡಿ. ಆದರೆ ಗ್ಯಾರಂಟಿ ಹೆಸರಿನಲ್ಲಿ ಯಾವ ಯಾವ ಬಾಬ್ರಿನಲ್ಲಿ ತೆರಿಗೆ ಹಾಕಲಾಗಿದೆ ಎಂದು ಬಹಿರಂಗಪಡಿಸಿ, ಏಪ್ರಿಲ್ ಫೂಲ್ ಬದಲಾಗಿ ಏಪ್ರಿಲ್ | ರಂದೆ ತೆರಿಗೆ ಹೆಚ್ಚಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಹಾಲು ಎಲ್ಲದರ ಮೇಲೂ ತೆರಿಗೆ ಹಾಕುತ್ತಿದ್ದಾರೆ. ಹಾಲಿನದರ ಹೆಚ್ಚಳವನ್ನು ರೈತರಿಗೆ ಕೊಡುತ್ತಾರೆ, ಮೊಸರಿನ ಮೇಲೆ ಹೆಚ್ಚಿಸಿರುವುದು ಯಾರ ಜೇಬಿಗೆ ಹೋಗುತ್ತದೆ? ಎಂದು ಪ್ರಶ್ನಿಸಿದರು. ಚರಂಡಿ, ತಡೆಗೋಡೆ, ರಾಜಕಾಲುವೆ ಕಾಮಗಾರಿಗಳ ಸ್ಥಿತಿಗತಿಯೇನು?, ಎಷ್ಟು ಹಣ ಖರ್ಚಾಗಿದೆ? ಎಂಬುದೆಲ್ಲಾ ಗೊತ್ತಿದೆ.
ಎಸ್.ಎಂ.ಕೃಷ್ಣ ಅವರ ಕಾಲದಿಂದಲೂ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ಮನೆಯೊಳಗಡೆ 3 ಅಡಿ ನೀರು ನಿಲ್ಲುತ್ತಿತ್ತು. ನಾನು ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಿಕೊಂಡೆ. ನನ್ನನ್ನು ಕರೆಸಿ ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ ಮಾಡಿದರು. ಚುನಾವಣೆ ಬಂದಾಗ ಆ ಭಾಗದಲ್ಲಿ ನಮ್ಮ ಪಕ್ಷಕ್ಕೆ 5-6 ಮತಗಳು ಮಾತ್ರ ಬಿದ್ದವು ಎಂದು ವಿಷಾದಿಸಿದರು. 2006 ರಿಂದ 2023ರವರೆಗೂ 5,600 ಕೋಟಿ ರೂ.ಗಳನ್ನು ತಡೆಗೋಡೆ ನಿರ್ಮಾಣಕ್ಕೆ ಖರ್ಚು ಮಾಡಿದ್ದೇವೆ ಎಂದು ಲೆಕ್ಕ ತೋರಿಸಲಾಯಿತು. ಇದರಲ್ಲಿ ನಡೆದ ವ್ಯವಹಾರಗಳೇನು? ಎಂದು ಪ್ರಶ್ನಿಸಿದರು.
ಈ ಹಿಂದೆ ಆನ್‌ಲೈನ್ ಸೇರಿದಂತೆ ಎಲ್ಲಾ ಲಾಟರಿ ನಿಷೇಧಿಸುವಾಗ ನನಗೆ ಭಾರೀ ಪ್ರಮಾಣದ ಆಮಿಷ ಬಂದಿತ್ತು. ಅದಕ್ಕೆ ಮಣಿಯದೆ ಬಡವರ ಬದುಕು ಉದ್ದಾರ ಮಾಡುವ ಕೆಲಸ ಮಾಡಿದೆ. ಸಂಪಾದನೆಗೆ ಬೇರೆಯೇ ಮಾರ್ಗಗಳಿವೆ ಎಂದರು. ಭ್ರಷ್ಟಾಚಾರ ತೊಡೆದು ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದವರು ಯಾವ ಮಟ್ಟಿನ ಲೂಟಿ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣದ ತನಿಖೆ ಹಾದಿ ತಪ್ಪಿದೆ.
ಕೊಲೆ ಯತ್ನದ ಆರೋಪ ಮತ್ತು ಹನಿಟ್ರ್ಯಾಪ್ ಪ್ರಕರಣ ಈ ಎರಡನ್ನೂ ಒಟ್ಟುಗೂಡಿಸಿದರೆ ಪ್ಯಾನ್ ಇಂಡಿಯಾ ಸಿನಿಮಾ ತೆಗೆಯುವಂತಹ ಕಥೆಗಳಿವೆ.ಮೊದಲು ಯಾರು, ಯಾರ ಮೇಲೆ ಹಲ್ಲೆ ಮಾಡಿದ್ದರು. ಅನಂತರ ಯಾಕೆ ಕೊಲೆ ಯತ್ನದ ಸಂಚು ನಡೆಯಿತು ಎಂಬುದೆಲ್ಲಾ ಅಧಿಕಾರಿಗಳಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದರು.ಈ ಸರ್ಕಾರದ ಕಾನೂನು ಸಲಹೆಗಾರರು ಯಾರಾರನ್ನು ಮುಗಿಸಬೇಕು?, ಯಾರ ಹೆಸರಿನಲ್ಲಿ ಡೆತ್ ನೋಟ್‌ಗಳನ್ನು ಸೃಷ್ಟಿಸಿದರು, ಎಂತಹ ಸಲಹೆ ನೀಡಿದರು ಎಂಬುದು ಗೊತ್ತಿದೆ. ಈಗ ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆ ಪ್ರಕರಣದಲ್ಲಿ ಯಾವ ರೀತಿ ನಡೆಯುತ್ತದೆ ಎಂದು ತಾವು ಕಾದುನೋಡುವುದಾಗಿ ತಿಳಿಸಿದರು.