ಬೆಂಗಳೂರು,ಅ.7- ವಿದ್ಯಾರ್ಥಿನಿ ಅನನ್ಯಾ ಭಟ್ ಪ್ರಕರಣದಲ್ಲಿ ತಾನು ತಪ್ಪು ಮಾಡಿದ್ದು ಈ ಬಗ್ಗೆ ಕ್ಷಮೆ ಕೇಳುತ್ತೇನೆ. ನನ್ನ 60 ವರ್ಷದ ಜೀವನದಲ್ಲಿ ಇದೊಂದು ನನಗೆ ಕಪ್ಪು ಚುಕ್ಕಿ ಎಂದು ಸುಜಾತಾ ಭಟ್ ಪಶ್ಚಾತಾಪ ಹೊರಹಾಕಿದ್ದಾರೆ.
ಇನ್ನಾದರೂ ನನಗೆ ಉತ್ತಮ ಜೀವನ ನಡೆಸುವ ಆಸೆಯಿದೆ. ಧರ್ಮಸ್ಥಳಕ್ಕೆ ಹೋಗಿ ತಪ್ಪು ಕಾಣಿಕೆ ಹಾಕುತ್ತೇನೆ, ಧರ್ಮಸ್ಥಳಕ್ಕೆ ಹೋಗಿ ಕಲ್ಲು ಒಡೆಯುತ್ತೇನೆ ಎಂದು ಹೇಳಿದ್ದೇನೆ, ನನ್ನಿಂದ ತಪ್ಪಾಗಿದೆ. ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ನಟನ ಸೋದರನಿಗೂ ನನಗೂ ಯಾವುದೇ ಸಂಬಂಧವಿಲ್ಲ, ನಟನ ಸೋದರನ ಮನೆಯಲ್ಲಿ ವಾಸಂತಿ ಇರಬಹುದು ಎಂಬ ಶಂಕೆ ನನಗಿದೆ. ಅದನ್ನು ಎಸ್‌ಐಟಿ ತನಿಖೆ ವೇಳೆ ಹೇಳಿದ್ದೆ, ಅವರು ತನಿಖೆ ಮಾಡಬಹುದು. ನಾನು ತಪ್ಪು ಮಾಡುಬಿಟ್ಟೆ. ಕೆಲವರ ಮಾತು ಕೇಳಿ ಕೆಟ್ಟಿದ್ದೇನೆ. ನನ್ನ ಜೀವನವೇ ಹಾಳಾಗಿ ಹೋಯಿತು. ದೇವರ ಬಳಿ ಕ್ಷಮೆ ಕೇಳುವೆ.
ಶೀಘ್ರವೇ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವಸ್ಥಾನದ ಮುಂದೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ. ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ. ಅನನ್ಯ ಭಟ್ ನನ್ನ ಮಗಳು ಎಂದು ಸುಳ್ಳು ಹೇಳಿದೆ. ಸುಳ್ಳಿನ ಮೇಲೆ ಸುಳ್ಳನ್ನೇ ಸೃಷ್ಟಿಸಿದೆ. ಶಿವಶಂಕರ್ ಎಂಬುವರು ಹೇಳಿದರು. ನನ್ನದು ಸ್ವಲ್ಪ ಜಮೀನಿನ ವಿಚಾರವಿತ್ತು. ಹೀಗಾಗಿ ನಾನು ತಪ್ಪು ಮಾಡಿದ್ದೇನೆ. ಬುರುಡೆ ಗ್ಯಾಂಗ್‌ಗೂ, ನನಗೂ ಸಂಬಂಧವಿಲ್ಲ. ಅವರ ಮಾತು ಕೇಳಿಯೇ ನಾನು ಕೆಟ್ಟೆ. ಇನ್ನು ನನ್ನ ಮನೆ ಬಾಗಿಲಿಗೆ ಅವರು ಬಂದರೂ ನಾನು ಒಳಗೆ ಬಿಡೊಲ್ಲ ಎಂದು ಸುಜಾತಾ ಭಟ್ ಹೇಳಿದ್ದಾರೆ.
ಈಗ ನನಗೆ ಬದುಕಲು ಕಷ್ಣವಾಗುತ್ತಿದೆ. ಜೀವನ ನಡೆಸಲು ಹಣ ಇಲ್ಲ. ಎಸ್‌ಐಟಿ ಅವರೇ ನನಗೆ ಮೊಬೈಲ್ ಕೊಡಿಸಿದ್ದರು. ಅವರ ಮುಂದೆ ಎಲ್ಲಾ ಸತ್ಯವನ್ನು ಹೇಳಿದ್ದೇನೆ. ಇದರಿಂದ ನನಗೆ ಮುಕ್ತಿ ಸಿಕ್ಕರೆ ಸಾಕು. ಅನನ್ಯಾ ಭಟ್ ಕಥೆ ಮುಗಿದ ಅಧ್ಯಾಯ. ಇನ್ನು ನನ್ನ ಹೊಸ ಜೀವನ ಧರ್ಮಸ್ಥಳಕ್ಕೆ ಹೋಗಿ ಬಂದೇಲೆ ಪ್ರಾರಂಭವಾಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.
ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅಬ್ಬರಿಸಿದ್ದ ಸುಜಾತಾ ಭಟ್ ಇದೀಗ ಸತ್ಯ ಹೊರಗೆ ಬಂದ ಮೇಲೆ ಮೌನಕ್ಕೆ ಶರಣಾಗಿದ್ದಾರೆ. ಮಾಡಿದ ತಪ್ಪನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಧರ್ಮಸ್ಥಳ ಪ್ರಕರಣದ ತನಿಖೆಯ ನಡುವೆಯೇ ಅನನ್ಯಾ ಭಟ್ ಪ್ರಕರಣ ಕೂಡ ಸದ್ದು ಮಾಡಿತ್ತು. ಇಲ್ಲದ ಮಗಳ ಬಗ್ಗೆ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದ ಸುಜಾತಾ ಭಟ್ ತಾನೇ ಹೆಣೆದ ಬಲೆಯಲ್ಲಿ ಬಿದ್ದಿದ್ದರು.
ಎಸ್‌ಐಟಿ ತನಿಖೆಯ ಜಾಡು ಹಿಡಿದು ಆಳಕ್ಕೆ ಇಳಿದ ನಂತರ ಅಸಲಿ ಸತ್ಯಾಂಶ ಹೊರಬಿದ್ದಿತ್ತು. ಮಾಧ್ಯಮಗಳ ಮುಂದೆ ಬಂದ ಸುಜಾತಾ ನಾನು ಹೇಳಿದ್ದೆಲ್ಲಾ ಕಟ್ಟುಕಥೆ ಎಂದು ಕ್ಷಮೆ ಕೇಳುವ ಬಗ್ಗೆ ಮಾತನಾಡಿದ್ದಾರೆ.
ಅನನ್ಯಾ ಭಟ್ ಬಗ್ಗೆ ಕಟ್ಟುಕತೆ ಕಟ್ಟಿ ಸುಜಾತಾ ಭಟ್ ಎಲ್ಲರನ್ನು ನಂಬಿಸುವ ಕೆಲಸ ಮಾಡಿದ್ದರು. ಬಳಿಕ ಇದೆಲ್ಲವನ್ನು ಜಮೀನು ವಿಚಾರವಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಅನನ್ಯಾ ಭಟ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ.