Friday, July 11, 2025
Homeರಾಜ್ಯಮುಂದಿನ ಬಾರಿಯೂ ನಾನೇ ಸಿಎಂ : ಕುರ್ಚಿ ಚದುರಂಗದಾಟದಲ್ಲಿ ಚಕ್ ಮೇಟ್ ಕೊಟ್ಟ ಸಿದ್ದರಾಮಯ್ಯ

ಮುಂದಿನ ಬಾರಿಯೂ ನಾನೇ ಸಿಎಂ : ಕುರ್ಚಿ ಚದುರಂಗದಾಟದಲ್ಲಿ ಚಕ್ ಮೇಟ್ ಕೊಟ್ಟ ಸಿದ್ದರಾಮಯ್ಯ

I will be the CM next time too: Siddaramaiah

ನವದೆಹಲಿ,ಜು.10- ಮುಂದಿನ ಅವಧಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿರುವ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಹೆಚ್ಚಿನ ಕಾಂಗ್ರೆಸ್‌‍ ಶಾಸಕರ ಬೆಂಬಲ ಇಲ್ಲ ಎಂದಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರುವ ಅವರು, ನಾನು 5 ವರ್ಷಗಳ ಅವಧಿ ಮುಖ್ಯ ಮಂತ್ರಿಯಾಗಿ ಪೂರ್ಣಗೊಳಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.
ಇದೇ ತಿಂಗಳ ಆರಂಭದಲ್ಲಿ ನಾನು ಈ ಹೇಳಿಕೆ ನೀಡಿದಾಗ ಡಿ.ಕೆ.ಶಿವಕುಮಾರ್‌ ಕೂಡ ಜೊತೆಯಲ್ಲೇ ಇದ್ದರು. ಮುಂದಿನ 2028 ರ ವಿಧಾನಸಭೆ ಚುನಾವಣೆಗೂ ನನ್ನದೇ ನಾಯಕತ್ವ ಇರುತ್ತದೆ ಎಂದರು.

ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿ ಶ್ರಮ ವಹಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರೇ ಆ ಸ್ಥಾನದಲ್ಲಿದ್ದರೂ ಅದೇ ರೀತಿ ಕೆಲಸ ಮಾಡಬೇಕು. ಡಿ.ಕೆ.ಶಿವಕುಮಾರ್‌ ಕೂಡ ತಮ ಕರ್ತವ್ಯ ಮಾಡಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್‌‍ ಶಾಸಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಭೆ ನಡೆಸಿದ ವೇಳೆ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಶ್ನೆ ಕೇಳಲಾಗಿಲ್ಲ, ಯಾವ ಶಾಸಕರೂ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ಹೇಳಿಲ್ಲ. ಕೆಲ ಶಾಸಕರು ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ಅದು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಎರಡೂವರೆ ವರ್ಷಗಳ ಅವಧಿಗೆ ಸೀಮಿತವಾಗಿ ಅಧಿಕಾರ ಹಂಚಿಕೆಯಾಗಿದೆ ಎಂಬುದು ಸರಿಯಲ್ಲ. ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು, ಡಿ.ಕೆ.ಶಿವಕುಮಾರ್‌ ಮತ್ತು ಎಲ್ಲರೂ ಅದನ್ನು ಅನುಸರಿಸುತ್ತೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ವಿಚಾರವಾಗಿ ತಮ ಬಳಿ ಏನನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುರ್ಜೇವಾಲ ಸಭೆ ನಡೆಸಿದ ವೇಳೆ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳು ಯಾವ ರೀತಿ ಅನುಷ್ಠಾನಗೊಂಡಿವೆ, ಏನೆಲ್ಲಾ ಅಭಿವೃದ್ಧಿ ಕೆಲಸಗಳಾಗಿವೆ, ಸರ್ಕಾರದಿಂದ ಮತ್ಯಾವ ರೀತಿಯ ಕೆಲಸಗಳಾಗಬೇಕು ಎಂಬ ಪ್ರಶ್ನೆಗಳನ್ನಷ್ಟೇ ಕೇಳಿದ್ದಾರೆ. ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯೇ ಆಗಿಲ್ಲ. ಹೀಗಾಗಿ ತಾವು ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ. ಸದ್ಯಕ್ಕೆ ಕುರ್ಚಿ ಖಾಲಿ ಇಲ್ಲ ಎಂದರು.

ಸಚಿವ ಸಂಪುಟ ಪುನರ್‌ ರಚನೆಯ ಬಗ್ಗೆಯೂ ಚರ್ಚೆಯಾಗಿಲ್ಲ. ಆ ರೀತಿಯ ಯಾವ ಬೆಳವಣಿಗೆಯೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿಲ್ಲ. ಇದಕ್ಕೆ ಹಣಕಾಸಿನ ಕೊರತೆಯೂ ಇಲ್ಲ. ಒಂದೆರಡು ಪ್ರಕರಣಗಳಲ್ಲಿ ವೇತನ ಪಾವತಿಯಾಗಿಲ್ಲ ಎಂದಾಕ್ಷಣ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂಬುದು ಸರಿಯಲ್ಲ. ಬಜೆಟ್‌ನಲ್ಲಿ ಘೋಷಿಸಿದ ಎಲ್ಲಾ ಕಾಮಗಾರಿಗಳು, ಯೋಜನೆಗಳು ಜಾರಿಯಲ್ಲಿವೆ. ಶಾಸಕರು ವಿಶೇಷ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆ ವಿಚಾರವಾಗಿ ಚರ್ಚೆ ನಡೆಯುತ್ತಿವೆ ಎಂದರು.

ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಶಾಸಕರು, ಸಚಿವರನ್ನು ಗುರಿಯಾಗಿಸಿಕೊಂಡೇ ಬಳಕೆ ಮಾಡಿಕೊಳ್ಳುತ್ತಿದೆೆ. ಗೃಹಸಚಿವ ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯಾಯಿತು. ಈಗ ಶಾಸಕರುಗಳ ಮನೆ ಮೇಲೆ ದಾಳಿಯಾಗಿದೆ. ನನ್ನನ್ನೂ ಸೇರಿದಂತೆ ಎಲ್ಲರ ವಿರುದ್ಧವೂ ಇ.ಡಿ. ನಿಗಾ ಇರಿಸಿದೆ ಎಂದು ಹೇಳಿದರು.

ಬಿಜೆಪಿಯ ವಿರುದ್ಧ ಶೇ.40 ರಷ್ಟು ಕಮಿಷನ್‌ ಆರೋಪ ಮಾಡಿದ್ದು ನಾವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದರು. ನಾವು ಅದನ್ನು ಪುನರುಚ್ಚರಿಸಿದ್ದೇವೆ.
ನಮ ಸರ್ಕಾರದ ವಿರುದ್ಧ ಶೇ.60 ರಷ್ಟು ಕಮಿಷನ್‌ ಆರೋಪವನ್ನು ಯಾರೂ ಮಾಡಿಲ್ಲ. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್‌‍ ಸರ್ಕಾರದ ಲೋಪವಾಗಲಿ, ವೈಫಲ್ಯವಾಗಲೀ ಇಲ್ಲ. ಆರ್‌ಸಿಬಿ ಮತ್ತು ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದ್ದವು. ಅವರ ಮನವಿಯ ಮೇರೆಗೆ ವಿಧಾನಸೌಧದ ಬಳಿ ಅಭಿನಂದನಾ ಸಮಾರಂಭ ನಡೆಸಲಾಯಿತು. ಸಂಜೆ 4.15 ಕ್ಕೆ ಕಾಲ್ತುಳಿತವಾಗಿದೆ. ಈ ವಿಚಾರವನ್ನು ಪೊಲೀಸ್‌‍ ಅಧಿಕಾರಿಗಳು ನನಗೆ ಮಾಹಿತಿ ನೀಡಲಿಲ್ಲ ಮತ್ತು ಸರಿಯಾದ ಭದ್ರತೆ ಒದಗಿಸಲಿಲ್ಲ. ಈ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂದರು.ರಾಜ್ಯದಲ್ಲಿ ಜಾತಿ ಜನಗಣತಿಯ 2ನೇ ಸಮೀಕ್ಷೆಯನ್ನು ಮೂರ್ನಾಲ್ಕು ತಿಂಗಳಲ್ಲೇ ಪೂರ್ಣಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

RELATED ARTICLES

Latest News