ಬೆಂಗಳೂರು, ಆ.10- ಬಿಜೆಪಿ-ಜೆಡಿಎಸ್ ಮಾಡುತ್ತಿರುವ ಆಧಾರರಹಿತ ಆರೋಪಗಳ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯಬೇಕು ಎಂಬ ಉದ್ದೇಶದಿಂದ ಆಧಾರ ರಹಿತ ಆರೋಪ ಮಾಡಿ ಪಾದಯಾತ್ರೆ ಮಾಡಿದ್ದಾರೆ.
ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂಬ ಕಾರಣಕ್ಕೆ ನಿನ್ನೆ ಜನಾಂದೋಲನ ಸಮಾವೇಶ ಮಾಡಲಾಯಿತು. ಸುಳ್ಳು ಆರೋಪ ಮಾಡುತ್ತಿರುವ ಅವರ ಹಗರಣಗಳು ಬೇಕಾದಷ್ಟು ಇವೆ. ಈಗಾಗಲೇ ಕೆಲವನ್ನು ಹೇಳಿದ್ದೇವೆ. ಕೆಲವು ಇನ್ನೂ ವಿಚಾರಣೆ ಹಂತದಲ್ಲಿವೆ. ವರದಿ ಬಂದ ನಂತರ ಅವುಗಳನ್ನು ಬಹಿರಂಗ ಪಡಿಸಲಾಗುವುದು ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಇದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜನರ ಆಶೀರ್ವಾದದಿಂದ ನಡೆಯುತ್ತಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಅದ್ಯಾವುದಕ್ಕೂ ನಾನು ಜಗ್ಗುವುದಿಲ್ಲ. ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದರೆ, ರಾಜಕೀಯವಾಗಿ ಅನುಕೂಲವಾಗಲಿದೆ ಎಂದು ಅವರು ಭಾಾವಿಸಿದ್ದಾರೆ ಎಂದು ಮುಖ್ಯಮಂತ್ರಿ ಟೀಕಿಸಿದರು.