Thursday, January 16, 2025
Homeರಾಜಕೀಯ | Politicsಪಕ್ಷದ ಅಧ್ಯಕ್ಷರಿಗೆ ಸ್ಪಷ್ಟ ಉತ್ತರ ನೀಡುತ್ತೇನೆ : ಸಚಿವ ಸತೀಶ್ ಜಾರಕಿಹೊಳಿ

ಪಕ್ಷದ ಅಧ್ಯಕ್ಷರಿಗೆ ಸ್ಪಷ್ಟ ಉತ್ತರ ನೀಡುತ್ತೇನೆ : ಸಚಿವ ಸತೀಶ್ ಜಾರಕಿಹೊಳಿ

I will give a clear answer to the party president: Minister Satish Jarkiholi

ಬೆಂಗಳೂರು,ಜ.16- ಕೆಪಿಸಿಸಿಯಿಂದ ನೋಟೀಸ್ ನೀಡಿದಾಕ್ಷಣ ದೊಡ್ಡ ಅನಾಹುತವೇನೂ ಆಗುವುದಿಲ್ಲ, ಪಕ್ಷದ ಅಧ್ಯಕ್ಷರಿಗೆ ಸ್ಪಷ್ಟ ಉತ್ತರ ನೀಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಹೇಳಿದ್ದನ್ನು ಬೇರೆ ರೀತಿ ಬಿಂಬಿಸಿ ಪಕ್ಷದ ಅಧ್ಯಕ್ಷರ ಮುಂದೆ ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಅವರು ನಾಲ್ಕು ಮಾತನಾಡುತ್ತಾರೆ. ತಿರುಗಿ ಅದೇ ರೀತಿಯ ಪ್ರಶ್ನೆಗಳನ್ನು ನನ್ನ ಬಳಿ ಕೇಳಲಾಗುತ್ತದೆ. ಈ ರೀತಿ ಪರಸ್ಪರ ಚರ್ಚೆಗಳು ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ಹೈಕಮಾಂಡ್ಗೆ ಮನವಿ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಇದು ಸರಿಯಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ಒಬ್ಬರಿಗೊಬ್ಬರು ಪ್ರಶ್ನೆ ಕೇಳಿ ಚರ್ಚೆ ಹುಟ್ಟುಹಾಕುವುದು ಸೂಕ್ತವಲ್ಲ. ನಾನು ಹೇಳಿದ್ದನ್ನು ಸೂಕ್ತವಾಗಿ ಜನರ ಮುಂದಿಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.

ಯಾವ ರೀತಿಯ ಪಕ್ಷವಿರೋಧಿ ಹೇಳಿಕೆಗಳನ್ನೂ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿರುವುದು ಹಾಗೂ ಕೆಪಿಸಿಸಿಯಿಂದ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಏನು ಬಹಳ ದೊಡ್ಡ ನೋಟಿಸ್ ಕೊಟ್ಟರೆ ಅದರಿಂದ ಅನಾಹುತವೇನೂ ಆಗುವುದಿಲ್ಲ, ನೋಟಿಸ್ ಕೊಡುವ ಅಧಿಕಾರ ಅವರಿಗಿದೆ, ನಾನು ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ, ನಾನು ಅರ್ಧಗಂಟೆ ಮಾಧ್ಯಮದವರ ಜೊತೆ ಮಾತನಾಡಿರುವ ವಿಡಿಯೋ ಸಾಕ್ಷ್ಯ ಕೂಡ ನನ್ನ ಬಳಿ ಇದೆ. ಅದನ್ನೇ ಆಧಾರವಾಗಿಟ್ಟುಕೊಂಡು ಉತ್ತರ ನೀಡುತ್ತೇನೆ ಎಂದರು.

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೆಂದು ಹೇಳಿಯೇ ಇಲ್ಲ. ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಹಜವಾಗಿ ಮಾತನಾಡಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗೂ ನೋವಾಗಿಲ್ಲ. ನಾನು ಹೇಳಿದ್ದನ್ನು ಬೇರೆ ರೀತಿಯೇ ತಿರುಚಲಾಗಿದೆ. ನೋಟಿಸ್ ಕೊಟ್ಟಿರುವುದಕ್ಕೆ ಉತ್ತರ ಕೊಡುತ್ತೇನೆ ಎಂದು ಅವರು ತಿಳಿಸಿದರು.ಜಾತಿ ಜನಗಣತಿಯ ವಿಚಾರ ಸಂಪುಟ ಸಭೆಗೆ ಬರದೇ ಇರುವುದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News