Friday, November 15, 2024
Homeರಾಜಕೀಯ | Politicsನಿನ್ನೆಮೊನ್ನೆ ರಾಜಕೀಯಕ್ಕೆ ಬಂದ ವಿಜಯೇಂದ್ರಗೆ ನಾನು ಉತ್ತರ ಕೊಡಲ್ಲ : ಸಿಎಂ ತಿರುಗೇಟು

ನಿನ್ನೆಮೊನ್ನೆ ರಾಜಕೀಯಕ್ಕೆ ಬಂದ ವಿಜಯೇಂದ್ರಗೆ ನಾನು ಉತ್ತರ ಕೊಡಲ್ಲ : ಸಿಎಂ ತಿರುಗೇಟು

I will not answer to Vijayendra: CM Siddu back

ಬೆಂಗಳೂರು,ನ.14- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗಳಿಗೆಲ್ಲಾ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಮಾಜಿ ಪ್ರಧಾನಿ ದಿ. ಪಂಡಿತ್ ಜವಹರಲಾಲ್ ನೆಹರೂ ಅವರ 135ನೇ ಜನದಿನಾಚರಣೆ ಅಂಗವಾಗಿ ವಿಧಾನಸೌಧದ ಪೂರ್ವದಿಕ್ಕಿನಲ್ಲಿರುವ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಪರೇಷನ್ ಕಮಲಕ್ಕೆ ಸಂಬಂಧಪಟ್ಟಂತೆ ದಾಖಲಾತಿಗಳಿದ್ದರೆ ಸಿದ್ದರಾಮಯ್ಯನವರೇ ತನಿಖೆ ಮಾಡಿಸಲಿ ಎಂದು ವಿಜಯೇಂದ್ರ ಸವಾಲು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಅವರ ಹೇಳಿಕೆಗೆಲ್ಲಾ ನಾನು ಉತ್ತರ ನೀಡುವುದಿಲ್ಲ. ಪಾಪ ಅವರು ಮೊನ್ನೆಮೊನ್ನೆ ರಾಜಕೀಯಕ್ಕೆ ಬಂದಿದ್ದಾರೆ. ಅವರ ಹೇಳಿಕೆಗಳಿಗೆಲ್ಲಾ ನನ್ನ ಬಳಿ ಏಕೆ ಪ್ರಶ್ನೆ ಕೇಳುತ್ತೀರಾ? ಎಂದರಲ್ಲದೆ, ಪಕ್ಕದಲ್ಲೇ ಇದ್ದ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ವಿಜಯೇಂದ್ರ ಹೇಳಿಕೆಗೆ ಉತ್ತರ ಕೊಡಪ್ಪಾ ನೀನು, ನಾನು ಕೊಡುವುದಿಲ್ಲ ಎಂದು ಸಲಹೆ ನೀಡಿದರು.

ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ನಗಣ್ಯ ಎಂದು ಬಿಂಬಿಸುವ ಪ್ರಯತ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದರು.ವಿಧಾನಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ. ತಮಗಿರುವ ಮಾಹಿತಿ ಪ್ರಕಾರ, ಎಲ್ಲಾ ಕಡೆ ನಮ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ ಎಂದರು.

ಪಂಡಿತ್ ಜವಹರಲಾಲ್ ನೆಹರೂ ಅವರು ಆಧುನಿಕ ಭಾರತ ದ ಶಿಲ್ಪಿ. ನೆಹರೂ ಅವರನ್ನು ಚಾಚಾ ನೆಹರೂ ಎಂದು ಕರೆಯಲಾಗುತ್ತಿದ್ದು, ಅವರಿಗೆ ಮಕ್ಕಳನ್ನು ಕಂಡರೆ ಹೆಚ್ಚು ಪ್ರೀತಿ. ಅದಕ್ಕಾಗಿ ಅವರ ಜನದಿನಾಚರಣೆಯನ್ನು ಮಕ್ಕಳ ದಿನಾಚರಣೆ ಎಂದು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

17 ವರ್ಷ ದೇಶದ ಪ್ರಧಾನಿಯಾಗಿದ್ದ ನೆಹರೂ ಮಿಕ್ಸೆಡ್ ಎಕಾನಮಿ ಅನ್ನು ಜಾರಿಗೊಳಿಸಿದರು. ಸಮಾಜವಾದಿಯಾಗಿದ್ದ ನೆಹರೂ ಅವರು ಲೋಹಿಯಾ ಅವರ ಜೊತೆ ಸೇರಿ ಕಾಂಗ್ರೆಸ್ ಪಕ್ಷವನ್ನು ಸಮಾಜವಾದಿ ಸೈದ್ಧಾಂತಿಕ ನಿಲುವಾಗಿ ರೂಪಿಸಲು ಯತ್ನಿಸಿದರು.

ಮೊದಲ ಪ್ರಧಾನಿಯಾಗಿ ಅವರು ರೂಪಿಸಿದ ಕಾರ್ಯಕ್ರಮಗಳು ಇಂದು ಸಾಕಷ್ಟು ಪರಿಣಾಮಗಳನ್ನು ಬೀರಿವೆ ಎಂದರು. ದೊಡ್ಡ ಕೈಗಾರಿಕೆಗಳು, ಬೃಹತ್ ನೀರಾವರಿ ಯೋಜನೆ ಮೂಲಕ ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ವಿಜ್ಞಾನ ಮತ್ತು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು ಎಂದರು.

ಭಾರತ ಆಹಾರದ ಸ್ವಾವಲಂಬಿಯಾಗಲು ಜಗಜೀವನ್ರಾಮ್, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾಗಿದೆ. ಒಂದು ಕಾಲದಲ್ಲಿ ಆಹಾರಕ್ಕಾಗಿ ಬೇರೆ ದೇಶದ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ಇತ್ತು. ಹಸಿರು ಕ್ರಾಂತಿಯ ಮೂಲಕ ಆಹಾರ ಸ್ವಾವಲಂಬನೆ ರೂಪಿಸಿದರು ಎಂದು ಹೇಳಿದರು.

RELATED ARTICLES

Latest News