ಬೆಂಗಳೂರು, ಮೇ 22 – ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ನ್ಯಾಯಾಂಗ ಬಂಧನದಲ್ಲಿರುವ ರನ್ಯಾರಾವ್ ಅವರ 40 ಲಕ್ಷ ಕ್ರೆಡಿಡ್ ಕಾರ್ಡ್ ಬಿಲ್ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಪಾವತಿ ಮಾಡಿರುವ ಆರೋಪ ಕುರಿತು ತಾವು ತಕ್ಷಣಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಿನ್ನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಮ್ಮ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು ಹಾಗೂ ಬೇಗೂರಿನಲ್ಲಿರುವ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಈ ಮೂರು ಶಿಕ್ಷಣ ಸಂಸ್ಥೆಗಳ ಜೊತೆಗೆ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಎಂಬ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಹಕರಿಸಲು ಸೂಚನೆ ನೀಡಿದ್ದೇನೆ ಎಂದರು.
ಶೈಕ್ಷಣಿಕ ಸಂಸ್ಥೆಗಳ ಕುರಿತಂತೆ ಇಡಿ ಅಧಿಕಾರಿಗಳು ಏನನ್ನು ಕೇಳುತ್ತಾರೋ ಅದನ್ನೆಲ್ಲಾ ಒದಗಿಸಲು ಒದಗಿಸಲು ಸೂಚನೆ ನೀಡಲಾಗಿದೆ. ಕೆಲ ಮಾಹಿತಿಗಳನ್ನು ಕಲೆ ಹಾಕಿ, ನಮ್ಮ ಆಕೌಂಟ್ಸ್ ವಿಭಾಗವನ್ನು ಪ್ರಶ್ನಿಸಿದ್ದಾರೆ. ಈ ನೆಲದ ಕಾನೂನಿನ ಮೇಲೆ ನಂಬಿಕೆ ಇಡುವ ವ್ಯಕ್ತಿಯಾಗಿ ಪರಿಶೀಲನೆಯಲ್ಲಿ ಏನು ಬರುತ್ತದೋ ಅದಕ್ಕೆ ಸಹಕರಿಸುತ್ತೇನೆ ಮತ್ತು ಸಿದ್ದನಿದ್ದೇನೆ. ಇಲ್ಲಿ ವೈಯಕ್ತಿಕ ವಿಚಾರಗಳಿಲ್ಲ, ಸಿದ್ದಾರ್ಥ ಒಂದು ಶಿಕ್ಷಣ ಸಂಸ್ಥೆ ಎಂದರು.
ರನ್ಯಾರಾವ್ ಅವರ ಕ್ರೆಡಿಟ್ ಕಾರ್ಡ್‌ನ 40 ಲಕ್ಷ ಬಿಲ್ ಅನ್ನು ಸಂಸ್ಥೆಯಿಂದ ಪಾವತಿಯಾಗಿರುವುದಕ್ಕೆ ಸಂಬಂಧಿಸಿದಂತೆ ಈ ಪರಿಶೀಲನೆ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಯಲ ನಿನ್ನೆ ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವುದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಈ ಹಂತದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಮೊದಲು ತನಿಖೆ ಮುಗಿಯಲಿ, ವರದಿ ಬರಲಿ. ಅದಕ್ಕೂ ಮುನ್ನಾ ಅನಗತ್ಯವಾಗಿ ನಾನು ಹೇಳಿಕೆ ನೀಡುವುದಿಲ್ಲ ಎಂದರು.
ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ದಾಳಿ ನಡೆಸಿದೆ ಎಂಬ ವ್ಯಾಖ್ಯಾನಗಳಿಗೂ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ಮೊದಲು ತನಿಖಾ ವರದಿ ಹೊರ ಬರಲಿ, ಅದಕ್ಕೂ ಮುನ್ನಾ ಮಾತನಾಡುವುದು ಸೂಕ್ತವಲ್ಲ ಎಂದು ಪುನರುಚ್ಚರಿಸಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಮುಂದೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬ ಕಾರಣಕ್ಕೆ ಪರಮೇಶ್ವರ್ ಅವರ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಆರೋಪಗಳಿಗೂ ನಾನು ಈಗ ಪ್ರತಿಕ್ರಿಯಿಸುವುದಿಲ್ಲ, ಅದಕ್ಕೆಲ್ಲಾ ಮುಂದೊಂದು ಕಾಲ ಬರಲಿದೆ ಎಂದರು.
ಮಾಜಿ ಶಾಸಕರಿಂದ ಹೆಚ್ ಎಂ ಎಸ್ ಶಿಕ್ಷಣ ಸಂಸ್ಥೆಯನ್ನು ಖರೀದಿಸುವಾಗ ಭೂಮಿಯ ಬೆಲೆಯನ್ನು ನಿಗದಿತ ಮೌಲ್ಯಕ್ಕಿಂತ ಕಡಿಮೆ ನಮೂದಿಸಲಾಗಿದೆ ಎಂಬ ಆರೋಪ ಕುರಿತು ಉತ್ತರಿಸಿದ ಅವರು, ಇದನ್ನೆಲ್ಲಾ ನೋಡಲು ಪ್ರತ್ಯೇಕ ವ್ಯವಸ್ಥೆ ಇದೆ. ಕಂದಾಯ ಇಲಾಖೆಯ ಸಬ್ ರಿಜಿಸ್ಟ್ರಾರ್ ಮೌಲ್ಯಮಾಪನ ಮಾಡುತ್ತಾರೆ. ಹೆಚ್ ಎಂ ಎಸ್ ಮತ್ತು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ನಡುವೆ ನ್ಯಾಯ ಸಮ್ಮತ ವ್ಯವಹಾರ ನಡೆದಿದೆ ಎಂದು ಹೇಳಿದರು. ಏನಾದರೂ ಲೋಪಗಳಾಗಿದ್ದರೆ ಅದನ್ನು ಪತ್ತೆ ಹಚ್ಚಲಿ. ಸದ್ಯಕ್ಕೆ ನಾನು ಏನ್ನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳ ಜಾರಿಕೊಂಡರು.