ಬೆಂಗಳೂರು, ಅ.9- ಆಸ್ಟ್ರೇಲಿಯಾ ವಿರುದ್ಧ ನಡೆದ 2023ರ ವಿಶ್ವಕಪ್ ಕ್ರಿಕೆಟ್‍ನ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರ ಶುಭಮನ್ ಗಿಲ್ ಅವರು ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಿಂದಲೂ ಬಹುತೇಕ ಹೊರಗುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಯ್ಕೆ ಮಂಡಳಿಯು ಡೆಂಗ್ಯು ಜ್ವರದಿಂದ ಬಳಲುತ್ತಿರುವ ಶುಭಮನ್ ಗಿಲ್ ಬದಲಿಗೆ ಇಶಾನ್ ಕಿಶನ್‍ಗೆ ಸ್ಥಾನ ಕಲ್ಪಿಸಿದ್ದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ ವ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ರನ್ ಖಾತೆ ತೆರೆಯದೆ ಆಸೀಸ್ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್‍ಗೆ ವಿಕೆಟ್ ಒಪ್ಪಿಸಿ ಇತಿಹಾಸ ಪುಟ ಸೇರಿಕೊಂಡರು.
BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ
ಆಫಾಘಾನಿಸ್ತಾನ ವಿರುದ್ಧ ಅಕ್ಟೋಬರ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಶಾನ್ ಕಿಶನ್ ಬದಲಿಗೆ ಸಿಡಿಲಮರಿ ಶುಭಮನ್ ಗಿಲ್ ಸ್ಥಾನ ಪಡೆಯುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ, ಗಿಲ್ ಟೀಮ್ ಇಂಡಿಯಾದ ಜೊತೆ ನವದೆಹಲಿಗೆ ಪ್ರಯಾಣ ಬೆಳೆಸುತ್ತಾರೆ ಆದರೆ ಪ್ಲೇಯಿಂಗ್ 11ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
`ಶುಭಮನ್ ಗಿಲ್ ಅವರು ಜ್ವರದಿಂದ ಚೇತರಿಕೆಯ ಹಾದಿಯಲ್ಲಿದ್ದು ಟೀಮ್ ಇಂಡಿಯಾ ಜೊತೆಗೆ ದೆಹಲಿ ಪ್ರಯಾಣ ಮಾಡುತ್ತಾರೆ. ಅವರು ಚಂಡೀಘಡದ ತಮ್ಮ ನಿವಾಸಕ್ಕೆ ಹೋಗಿ ವಿಶ್ರಾಂತಿ ಪಡೆಯಲು ಬಯಸದೆ ಭಾರತ ತಂಡದ ಜೊತೆಗೆ ಇರುತ್ತಾರೆ, ಆದರೆ ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಬಹುತೇಕ ಅಲಭ್ಯರಾಗಿದ್ದರೂ, ಅಕ್ಟೋಬರ್ 14ರಂದು ಸಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಿಂದ ತಂಡಕ್ಕೆ ಲಭ್ಯವಾಗಲಿದ್ದಾರೆ’ ಎಂದು ತಿಳಿದುಬಂದಿದೆ.