ಚಿತ್ರದುರ್ಗ,ಅ.15- ಸಾಲು ಸಾಲು ಚುನಾವಣೆ ಸೋತು ದೇಶದಲ್ಲೇ ಅಸ್ತಿತ್ವಕ್ಕೆ ಪರದಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆರ್‌ಎಸ್‌ಎಸ್ ನಿಷೇಧ ಮಾಡುವ ದಮ್ಮು ಇಲ್ಲವೇ ತಾಕತ್ತು ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ನಿಷೇಧ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಮೂರ್ಖತನದ ಪರಮಾವಧಿ. ನಿಮಿಂದ ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ದೇಶದಲ್ಲಿ ಕಾಂಗ್ರೆಸ್ ಎಲ್ಲಾ ಚುನಾವಣೆಗಳಲ್ಲಿ ಸೋತು ಅಸ್ತಿತ್ವವನ್ನೇ ಕಳೆದುಕೊಂಡಿದೆ. ಒಂದೆರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇಂತಹ ಪಕ್ಷ ಶತಮಾನಗಳ ಇತಿಹಾಸವಿರುವ ಆರ್‌ಎಸ್‌ಎಸ್‌ನ್ನು ನಿಷೇಧ ಮಾಡುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಅದನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಗುಡುಗಿದರು.
ಆರ್‌ಎಸ್‌ಎಸ್ ಒಂದು ದೇಶಭಕ್ತ ಸಂಘಟನೆ. ಅವರೇನು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಸನಾತನ ಧರ್ಮ ಉಳಿಸುವಿಕೆ ರಾಷ್ಟ್ರ ರಕ್ಷಣೆ, ದೇಶಭಕ್ತಿಗಾಗಿ ಹೋರಾಟ ಮಾಡುತ್ತಿದೆ. ಭಾರತವಲ್ಲದೆ 40 ರಾಷ್ಟ್ರಗಳಲ್ಲಿ ಅದರ ಸಂಘಟನೆಗಳು ವಿಸ್ತರಣೆಯಾಗಿವೆ. ಇಂತಹ ಸಂಘಟನೆಯನ್ನು ಪ್ರಿಯಾಂಕ ಖರ್ಗೆ ಇರಲಿ ಅಥವಾ ಇನ್ಯಾರು ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಆರ್‌ಎಸ್‌ಎಸ್ ನಿಷೇಧ ಮಾಡುವುದು ಆಮೇಲಿರಲಿ. ಮೊದಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿ ನೀವು ನಿಮ ಇಲಾಖೆಯಲ್ಲಿ ಮಾಡಿರುವ ಸುಧಾರಣೆಗಳೇನು? ಎಷ್ಟು ಅಭಿವೃದ್ಧಿ ಮಾಡಿದ್ದೀರಿ? ಇಲಾಖೆಯಲ್ಲಿ ಯಾವುದಾದರೂ ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೀರಾ? ಮೊದಲು ಅದನ್ನು ಜನತೆಯ ಮುಂದಿಡಿ ಎಂದು ವಿಜಯೇಂದ್ರ ಸವಾಲು ಹಾಕಿದರು.
ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಜನರ ಸಂತ್ರಸ್ತರಾಗಿದ್ದಾರೆ. ಅವರಿಗೆ ಪರಿಹಾರವನ್ನೇ ಒದಗಿಸಿಲ್ಲ. ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನು ವಿಷಯಾಂತರ ಮಾಡಲು ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಿಂದ ಹಣ ಕೊಟ್ಟರೆ ಹೈಕಮಾಂಡ್ ಖುಷಿಪಡಿಸಬಹುದೆಂಬ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಹದಗೆಟ್ಟ ರಸ್ತೆಗಳು, ಗುಂಡಿಗಳು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೆ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಂಡವಾಳ ಹೂಡುವವರು ಸರಿಯಾದ ಮೂಲಭೂತ ಸೌಕರ್ಯ ಇಲ್ಲ ಎಂದರೆ ಬೇರೆ ರಾಜ್ಯಗಳಿಗೆ ಹೋಗುವುದು ಅನಿವಾರ್ಯವಾಗುತ್ತದೆ ಎಂದರು.