ಬೆಂಗಳೂರು,ಸೆ.30– ಕರ್ನಾಟಕ ಗುತ್ತಿಗೆದಾರರು ಸಂಘವು ಕಾಂಗ್ರೆಸ್ ಭ್ರಷ್ಟಾಚಾರ ಬಯಲು ಮಾಡಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಘನತೆ ಉಳಿದಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರತಿಪಕ್ಷದಲ್ಲಿದ್ದಾಗ ಸಿ.ಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳು ಶೇ.40 ಪರ್ಸೆಂಟ್ ಕಮಿಷನ್ ಎಂದು ಆರೋಪಿಸಿದ್ದರು. ಇಂದು ಇವರ ಆಳ್ವಿಕೆಯಲ್ಲಿ ಗುತ್ತಿಗೆದಾರರೇ ದುಪ್ಪಟ್ಟಾಗಿರುವುದನ್ನು ಬಯಲಿಗೆಳೆದಿದ್ದಾರೆ- ಕರ್ನಾಟಕದಲ್ಲಿ ಶೇ.80 ಕಮಿಷನ್ ಸರ್ಕಾರವಾಗಿದೆ ಎಂದು ವಾಗ್ದಳಿ ನಡೆಸಿದ್ದಾರೆ.
ಕರ್ನಾಟಕ ಗುತ್ತಿಗೆದಾರರು ಸಂಘವು, ಪತ್ರದಲ್ಲಿ ಹೆಸರಿಸಿರುವ ಸಚಿವರು ಆರೋಪಗಳನ್ನು ನಿರಾಕರಿಸಲು ಏಕೆ ಮುಂದಾಗಿಲ್ಲ? ರಾಜ್ಯದ ಕೀರ್ತಿಯನ್ನು ಕೆಸರೆರಚಾಟದ ಮೂಲಕ ಎಳೆದು ತರುತ್ತಿರುವಾಗ ಸಿಎಂ ಮೌನವಾಗಿರುವುದೇಕೆ? ಎಂದು ತರಾಟೆಗೆತಗೆದುಕೊಂಡಿದ್ದಾರೆ.
ಬಿಡದಿ ಟೌನ್‌ಶಿಪ್‌ನಂತಹ ಯೋಜನೆಗಳನ್ನು ಅಕ್ರಮ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಮತ್ತು ಫಲವತ್ತಾದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಏಕೆ ಬಳಸಲಾಗುತ್ತಿದೆ? ಇದು ದ್ರೋಹದ ಪರಮಾವಧಿ. ಪಾರದರ್ಶಕತೆ ಬದಲಿಗೆ ಕಾಂಗ್ರೆಸ್ ಕಿರುಕುಳ, ಲೂಟಿ ಮತ್ತು ಹಿಂಬಾಗಿಲ ಭ್ರಷ್ಟಾಚಾರವನ್ನು ನೀಡಿದೆ.ಕರ್ನಾಟಕವು ಈ ಭ್ರಷ್ಟ ಕಾಂಗ್ರೆಸ್ ಆಡಳಿತವನ್ನು ಇನ್ನು ಮುಂದೆ ಭರಿಸಲು ಸಾಧ್ಯವಿಲ್ಲ ಎಂದು ಅಶೋಕ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.