ಬೆಂಗಳೂರು,ಡಿ.5- ಅಧಿಕಾರ ಹಂಚಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಹೇಳಿಕೆ, ಪ್ರತಿಹೇಳಿಕೆಗಳಿಗೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿರುವ ಡಾ.ಜಿ.ಪರಮೇಶ್ವರ್ ಅಂತಹ ಒಪ್ಪಂದಗಳಾಗಿದ್ದರೆ ಅವರಿಬ್ಬರೇ ಆಡಳಿತ ಮಾಡಿಕೊಳ್ಳಲಿ, ನಾವೆಲ್ಲಾ ಏಕೆ ಬೇಕು ಎಂದು ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅದಕ್ಕೆ ಯಾವ ರೀತಿಯ ಒಪ್ಪಂದಗಳೂ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ ಎಂದರು.
ಒಪ್ಪಂದ ಆಗಿರುವ ಬಗ್ಗೆ ನಮಗಂತೂ ಮಾಹಿತಿ ಇಲ್ಲ. ನಾನೂ ಕೂಡ ದೆಹಲಿಯಲ್ಲಿ ಇಬ್ಬರು, ಮೂವರನ್ನು ವಿಚಾರಿಸಿದ್ದೇನೆ. ಬೆಂಗಳೂರಿನಲ್ಲೂ ಕೇಳಿದ್ದೇನೆ. ಒಪ್ಪಂದವಾಗಿದೆ ಎಂದು ಯಾರೂ ಹೇಳಿಲ್ಲ. ಒಪ್ಪಂದ ಆಗಿದೆ ಎಂದಾದರೆ ನಾವೆಲ್ಲಾ ಏಕೆ ಬೇಕು?, ಅವರಿಬ್ಬರೇ ರಾಜಕಾರಣ ಮಾಡಿ, ಅವರೇ ಎಲ್ಲಾ ನಡೆಸಿಬಿಡಲಿ, ಬೇರೆ ಯಾರೂ ಇರೋದೆ ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ಆ ರೀತಿಯೆಲ್ಲಾ ಆಗಲು ಸಾಧ್ಯವಿಲ್ಲ. ನಾವೆಲ್ಲಾ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುವವರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಒಪ್ಪಿಕೊಳ್ಳುತ್ತೇವೆ. ಪಕ್ಷವನ್ನು ಬಿಟ್ಟು ನಾವು ಏನನ್ನೂ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಡಿ.ಕೆ.ಶಿವಕುಮಾರ್ ಕೊನೆಗೆ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆಯಿಟ್ಟು ಅವಕಾಶ ವಂಚಿತರಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಚರ್ಚೆ ಬಂದಾಗ ಕೇವಲ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆಯೇ ವಿಚಾರ ಗಿರಕಿ ಹೊಡೆಯುವುದರಿಂದ ಅಸಹನೆಗೀಡಾಗಿರುವ ಪರಮೇಶ್ವರ್, ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ತಮ ಆಕ್ರೋಶ ಹೊರಹಾಕಿದ್ದಾರೆ.