ಬೆಂಗಳೂರು, ಮಾ.18– ಈ ತಿಂಗಳ ಅಂತ್ಯದೊಳಗೆ ಬಾಕಿ ಇರುವ ನಿಮ ಆಸ್ತಿ ತೆರಿಗೆ ಪಾವತಿಸಿಕೊಳ್ಳಿ ಇಲ್ಲದಿದ್ದರೆ, ಏಪ್ರಿಲ್‌ನಿಂದ ನೀವು ಶೇ.15 ರಷ್ಟು ಬಡ್ಡಿಯೊಂದಿಗೆ ದುಪ್ಪಟ್ಟು ತೆರಿಗೆ ಪಾವತಿಸುವುದು ಅನಿವಾರ್ಯವಾಗಲಿದೆ.
ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿ ರುವವರಿಗಾಗಿ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯನ್ನು ಬಿಬಿಎಂಪಿ ಜಾರಿಗೊಳಿಸಿದ್ದರೂ ಯಾರೂ ಆ ಯೋಜನೆಯ ಸದುಪಯೋಗಪಡಿಸಿ ಕೊಳ್ಳದಿರುವುದನ್ನು ಗಂಭೀರವಾಗಿ ಪರಿಗಣಿಸಿ ಬಿಬಿಎಂಪಿ ಇಂತಹ ಗಟ್ಟಿ ತೀರ್ಮಾನ ಕೈಗೊಂಡಿದೆ.
ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸದಿದ್ದಲ್ಲಿ ಮರು ವರ್ಷ ಅದರ ದುಪ್ಪಟ್ಟು ಹಣವನ್ನು ದಂಡದ ರೂಪದಲ್ಲಿ ಶೇ. 15% ರಷ್ಟು ಬಡ್ಡಿ ದರದೊಂದಿಗೆ ವಸೂಲಿ
ಮಾಡಬೇಕೆಂಬ ಎಂಬ ಆದೇಶ ಹೊರಡಿಸಲಾಗಿದೆ.ಪ್ರಸ್ತುತ ಸಾಲಿನಿಂದಲೇ ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧವಾಗಿರುವುದರಿಂದ ಇನ್ನು ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಮಾಲೀಕರು ಆಯಾ ಆರ್ಥಿಕ ವರ್ಷದಲ್ಲಿ ತಮ್ಮ ತಮ್ಮ ಸ್ವತ್ತುಗಳಿಗೆ ಆಸ್ತಿ ತೆರಿಗೆಯನ್ನು ಪಾವತಿಸಲು ವಿಫಲರಾದಲ್ಲಿ, ಮುಂದಿನ ಆರ್ಥಿಕ ವರ್ಷದಲ್ಲಿ ಹಿಂದಿನ ವರ್ಷದ ಆಸ್ತಿ ತೆರಿಗೆಯ ಎರಡು ಪಟ್ಟು ಹಣವನ್ನು ದಂಡದ ರೂಪದಲ್ಲಿ ಮತ್ತು ಶೇ. 15% ರಷ್ಟು ಬಡ್ಡಿ ದರದೊಂದಿಗೆ ಪಾವತಿಸಬೇಕಿರುತ್ತದೆ.
ಒಂದು ಸ್ವತ್ತಿಗೆ ವಾರ್ಷಿಕ ತೆರಿಗೆ 50 ಸಾವಿರ ರೂಪಾಯಿಗಳಷ್ಟು ಇದ್ದು, ಆ ಸಾಲಿನ 50 ಸಾವಿರ ರೂಪಾಯಿಗಳಷ್ಟು ಮೊತ್ತದ ಆಸ್ತಿ ತೆರಿಗೆಯನ್ನು ಪಾವತಿಸದೇ ಹೋದಲ್ಲಿ, ಮುಂದಿನ ಆರ್ಥಿಕ ವರ್ಷದಲ್ಲಿ ಅದರ ದುಪ್ಪಟ್ಟು ಹಣವನ್ನು ಅಂದರೆ, 01 ಲಕ್ಷ ರೂಪಾಯಿಗಳಷ್ಟು ಹಣವನ್ನು ದಂಡದ ರೂಪದಲ್ಲಿ ಮತ್ತು ಶೇ. 15ರಷ್ಟು ಬಡ್ಡಿ ದರದೊಂದಿಗೆ ಒಟ್ಟು 1,07,500 ರೂ.ಗಳನ್ನ್ನು ಪಾವತಿಸಬೇಕಿರುತ್ತದೆ.
ಸದರಿ ಅಧಿಸೂಚನೆಯಲ್ಲಿರುವಂತೆ 12 ತಿಂಗಳುಗಳ ಮುಕ್ತಾಯದ ತರುವಾಯ, ಅಂದರೆ ಆರ್ಥಿಕ ವರ್ಷವು ಕೊನೆಗೊಂಡ ಎರಡನೇ ವರ್ಷದ ತರುವಾಯ ತೆರಿಗೆಯು ಬಾಕಿಯಾದಾಗ, ಆವರೆಗೂ ತೆರಿಗೆಯು ಪಾವತಿಯಾಗದಿದ್ದರೆ ಪಾವತಿಯಾಗದ ತೆರಿಗೆಗೆ ಸಮನಾದ ದಂಡದ ಜೊತೆಗೆ ಪಾವತಿಯಾಗದ ತೆರಿಗೆಯ ಮೇಲೆ ವಾರ್ಷಿಕವಾಗಿ ಶೇ. 9ರಷ್ಟು ದರದಲ್ಲಿನ ಬಡ್ಡಿಯೊಂದಿಗೆ ಪಾವತಿಯಾಗದ ತೆರಿಗೆಯನ್ನು ಸಂದಾಯ ಮಾಡಬೇಕಿದೆ.
ಆಕ್ರೋಶ; ನಗರದ ನಾಗರಿಕರ ಮೇಲೆ ಈ ರೀತಿಯ ಜನವಿರೋಧಿ ಯೋಜನೆ ಹೇರಲು ಮುಂದಾಗಿರುವ ಕ್ರಮಕ್ಕೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಈ ಕೂಡಲೇ ಇಂತಹ ಯೋಜನೆಯನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮಿಕೊಳ್ಳಲಾಗುವುದು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಖಜಾನೆ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಇಂತಹ ಜನ ವಿರೋಧಿ ನೀತಿಯನ್ನು ಜಾರಿಗೊಳಿಸುವ ಬದಲು ಪಾಲಿಕೆಯ ಜಾಹೀರಾತು ವಿಭಾಗದ ಅಧಿಕಾರಿಗಳಿಂದ ಸಮರ್ಪಕವಾಗಿ ಕೆಲಸ ಮಾಡಿಸಿದರೆ ಪ್ರತಿ ವರ್ಷ 3 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂಗ್ರಹವಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ. ಅದೇ ರೀತಿ ಎಂಜಿನಿಯರ್‌ಗಳು, ಹಿರಿಯ ಆರೋಗ್ಯ ಪರಿವೀಕ್ಷಕರುಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇ ಆದಲ್ಲಿ ವರ್ಷಂಪ್ರತಿ 1500 ಕೋಟಿ ರೂಪಾಯಿಗಳಿಗೂ ಹೆಚ್ಚು ತೆರಿಗೆ ಸಂಗ್ರಹಿಸಬಹುದಾಗಿದೆ.
ಇನ್ನು ಬಿಬಿಎಂಪಿಯಲ್ಲಿರುವ ಇತರೆ ಅಧಿಕಾರಿಗಳು ತಮ ಕರ್ತವ್ಯ ಪ್ರಜ್ಞೆ ಮೆರೆದರೆ ಸಾವಿರಾರು ಕೋಟಿ ರೂ.ಗಳ ಅದಾಯ ಬರಲಿದೆ. ಹೀಗಾಗಿ ಅಂತಹ ಕೆಲಸಕ್ಕೆ ಒತ್ತು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಂಪನೂಲ ಸಂಗ್ರಹಿಸಿ ಅದನ್ನು ಬಿಟ್ಟು ಈ ರೀತಿ ನಗರದ ನಾಗರಿಕರ ಮೇಲೆ ಬರೆ ಎಳೆಯಲು ಮುಂದಾದರೆ ಜನರು ನಿಮ ವಿರುದ್ಧ ತಿರುಗಿಬೀಳುವ ಸಾಧ್ಯತೆ ಇರುವುದರಿಂದ ಈ ಯೋಜನೆಯನ್ನು ಕೈ ಬಿಡಿ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.