ಬೆಂಗಳೂರು, ಅ.28- ಮಾಡಿದ್ದುಣ್ಣೋ ಮಹಾರಾಯ ಅನ್ನೋ ಗಾದೆ ಮಾತಿನ ಹಾಗೆ… ನೀವು ರಸ್ತೆ ಬದಿ ಎಲ್ಲೆಂದರಲ್ಲಿ ಬಿಸಾಡಿದ್ದ ಕಸ ನಿಮ ಮನೆ ಬಾಗಿಲಿಗೆ ಮತ್ತೆ ವಾಪಸ್ ಬರುವ ದಿನ ದೂರವಿಲ್ಲ.
ಎಷ್ಟು ಬುದ್ದಿಮಾತು ಹೇಳಿದರೂ ಜನ ಪಾಠ ಕಲಿಯದ ಹಿನ್ನೆಲೆಯಲ್ಲಿ ಜಿಬಿಎ ಅಧಿಕಾರಿಗಳು ಜನ ಎಸೆದ ಕಸವನ್ನು ಮತ್ತೆ ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಹೋಗುವ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಘನತ್ಯಾಜ್ಯ ಘಟಕದ ಸಿಬ್ಬಂದಿಗಳು ರಸ್ತೆಯಲ್ಲಿ ಕಸ ಎಸೆಯುವವರು ವಿಡಿಯೋ ಮಾಡಿಕೊಂಡಿದ್ದು, ಯಾರ್ಯಾರು ರಸ್ತೆಗಳಲ್ಲಿ ಕಸ ಎಸೆದಿದ್ದಾರೋ ಅಂತಹವರ ಮನೆ ಬಾಗಿಲಿಗೆ ಮತ್ತೆ ವಾಪಸ್ ಕಳುಹಿಸಲು ಸದ್ದಿಲ್ಲದೆ ಕಾರ್ಯಚರಣೆ ಆರಂಭಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಪ್ರತಿ ವಾರ್ಡನಲ್ಲಿ ರಸ್ತೆ ಮೂಲೆಯಲ್ಲಿ ಕಸ ಎಸೆದ ಜನರ ವಿಡಿಯೋ ಮಾಡಲಾಗಿದೆ. ಈಗಾಗಲೇ 198 ವಾರ್ಡ್‌ಗಳಲ್ಲಿ 198 ಕಸ ಎಸೆಯೋ ಜನರನ್ನು ಗುರುತಿಸಿರುವ ಜಿಬಿಎ ಅಧಿಕಾರಿಗಳು ಅವರವರ ಮನೆಗಳಿಗೆ ಕಸ ವಾಪಸ್ ಕಳುಹಿಸಲಿದ್ದಾರೆ.
ತಾವು ಎಸೆದ ಕಸ ಮತ್ತೆ ತಮ ಮನೆ ಬಾಗಿಲಿಗೆ ವಾಪಸ್ ಆಗುವ ಭೀತಿಯಿಂದಾದರೂ ಜನ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕುವರೇ ಎಂಬ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಘನತ್ಯಾಜ್ಯ ವಿಲೇವಾರಿ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಲಾದರೂ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಬಿಟ್ಟು ನಿಮ ಮನೆ ಬಾಗಿಲಿಗೆ ಬರುವ ಕಸದ ವಾಹನಗಳಿಗೆ ಕಸಹಾಕುವ ಮೂಲಕ ನಗರದ ರಸ್ತೆಗಳನ್ನು ಹಾಳುಗೆಡವಲು ಬಿಡಬೇಡಿ ಎಂದು
ಘನತ್ಯಾಜ್ಯ ವಿಲೇವಾರಿ ಘಟಕದ ಮುಖ್ಯಸ್ಥ ಕರೀಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.
