ಬೆಂಗಳೂರು,ಜ.6- ಸ್ನೇಹಿತನ ಕೊಠಡಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ತನ್ನ ಕೊಠಡಿಗೆ ಹಿಂದಿರುಗುತ್ತಿದ್ದ ಐಐಎಂ ಸ್ನಾತಕೋತ್ತರ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲುಜಾರಿ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಮೈಕೋಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗುಜರಾತ್ ಮೂಲದ ನಿಲಯ್ ಕೈಲಾಶ್ ಬಾಯ್ ಪಟೇಲ್(28) ಮೃತಪಟ್ಟ ವಿದ್ಯಾರ್ಥಿ.
ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂನಲ್ಲಿ 2ನೇ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಈತ ಕ್ಯಾಂಪ್ಸ್ಹಾಸ್ಟೆಲ್ನ ಎಫ್ ಬ್ಲಾಕ್ನಲ್ಲಿ ಉಳಿದುಕೊಂಡಿದ್ದನು.
ಶನಿವಾರ ನಿಲಯ್ ತನ್ನ ಹುಟ್ಟುಹಬ್ಬವಿದ್ದುದರಿಂದ ಸ್ನೇಹಿತರ ಜೊತೆ ಹೊರಗೆ ಹೋಗಿ ಹಾಸ್ಟೆಲ್ಗೆ ಹಿಂದಿರುಗಿದ್ದರು. ರಾತ್ರಿ ಹಾಸ್ಟೆಲ್ನ ಬೇರೆ ಬ್ಲಾಕ್ನಲ್ಲಿರುವ ಸ್ನೇಹಿತನ ಕೊಠಡಿಯಲ್ಲಿ ಹುಟ್ಟುಹಬ್ಬ ಆಚರಣೆಗೆ ಹೋಗಿದ್ದನು.ಅಂದು ರಾತ್ರಿ 11.30ರ ಸುಮಾರಿನಲ್ಲಿ ಹುಟ್ಟುಹಬ್ಬ ಸಂಭ್ರಮಾಚರಣೆ ಮುಗಿಸಿ ತನ್ನ ಬ್ಲಾಕ್ಗೆ ನಿಲಯ್ ಹೋಗುತ್ತಿದ್ದಾಗ ಆಕಸಿಕವಾಗಿ ಕಾಲು ಜಾರಿ 3ನೇ ಮಹಡಿಯಿಂದ ಬಿದ್ದಿದ್ದಾನೆ. ಇದು ಯಾರ ಗಮನಕ್ಕೂ ಬಂದಿಲ್ಲ.
ನಿನ್ನೆ ಬೆಳಗ್ಗೆ ಹಾಸ್ಟೆಲ್ ಸೆಕ್ಯೂರಿಟಿ ಗಾರ್ಡ್ ಗಮನಿಸಿ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸಿಬ್ಬಂದಿ ತಕ್ಷಣ ಬಂದು ನಿಲಯ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ತಕ್ಷಣ ಕಾಲೇಜು ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಮೈಕೋಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ನಗರಕ್ಕೆ ಬಂದಿದ್ದಾರೆ.
ಮೈಕೋಲೇಔಟ್ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ.