ಬೆಳ್ತಂಗಡಿ, ಸೆ.18- ಹೋರಾಟಗಾರ ಮಹೇಶ್‌ಶೆಟ್ಟಿ ತಿಮರೋಡಿ ಮನೆಯಲ್ಲಿ ಬಂದೂಕು ಹಾಗೂ ಮಾರಕಾಸ್ತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಮಹೇಶ್‌ಶೆಟ್ಟಿ ಅವರ ಮನೆಯಲ್ಲಿ ಬುರುಡೆ ಚಿನ್ನಯ್ಯ ತಂಗುತ್ತಿದ್ದ ಬಗ್ಗೆ ತಿಳಿಸಿದ್ದನು. ಹಾಗಾಗಿ ತನಿಖೆಯ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಸಿಬ್ಬಂದಿ ಹಾಗೂ ಸೋಕೋ ಅಧಿಕಾರಿಗಳು, ಎಸ್‌ಐಟಿ ತಂಡದ ಜೊತೆಗೆ ಉಜಿರೆ ಗ್ರಾಮದಲ್ಲಿರುವ ಮಹೇಶ್‌ಶೆಟ್ಟಿ ತಿಮರೋಡಿ ಮನೆಯಲ್ಲಿ ಆ. 26ರಂದು ಶೋಧ ನಡೆಸಿದ್ದರು.
ಆ ಮನೆಯಲ್ಲಿ ಬುರುಡೆ ಚಿನ್ನಯ್ಯನ ಬಟ್ಟೆಗಳು ಮತ್ತು ತಿಮರೋಡಿ ಮನೆಯವರಿಗೆ ಸೇರಿದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ 2 ತಲವಾರುಗಳು, 1 ಬಂದೂಕು ಸೇರಿ 44 ವಸ್ತುಗಳನ್ನು ಮಹಜರು ನಡೆಸಿ ವಶಪಡಿಸಿಕೊಳ್ಳಲಾಗಿತ್ತು.
ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಸಬಂಧ ಎಸ್‌ಐಟಿ ತನಿಖಾಧಿಕಾರಿ ಎಸ್‌ಪಿ ಸೈಮನ್ ಅವರು ಮುಂದಿನ ತನಿಖೆ ನಡೆಸಲು ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಹೇಶ್ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.