ಬೆಂಗಳೂರು,ಜು.10- ಶಾಸಕರ ಅಭಿಪ್ರಾಯ ಸಂಗ್ರಹದ ಬಳಿಕ ದೆಹಲಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರ ನಡುವೆ ಮಹತ್ವದ ಸಮಾಲೋಚನೆ ನಡೆಯಲಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ವಿವಿಧ ಕಾರಣಗಳಿಗಾಗಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ವೈಯಕ್ತಿಕ ಸಂವಾದ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ದೆಹಲಿಗೆ ತೆರಳಿದ್ದಾರೆ.
ಶಾಸಕರ ಅಭಿಪ್ರಾಯಗಳನ್ನು ಆಧರಿಸಿ ಪಕ್ಷ ಹಾಗೂ ಆಡಳಿತದಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಬಗ್ಗೆ ಇಂದು ದೆಹಲಿಯಲ್ಲಿ ಚರ್ಚೆ ನಡೆಯಲಿದೆ.ಎಐಸಿಸಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚರ್ಚೆ ನಡೆಸುವ ಸಾಧ್ಯತೆಯಿದೆ.
ಈ ನಡುವೆ ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿದ್ದು ಅವರು ಸಭೆಯಲ್ಲಿ ಉಪಸ್ಥಿತರಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಬಹಳಷ್ಟು ಮಂದಿ ಶಾಸಕರು ಸಚಿವರ ಕಾರ್ಯವೈಖರಿಯ ವಿರುದ್ದ ದೂರು ನೀಡಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಎದುರಾಗುತ್ತಿರುವ ತೊಡಕುಗಳ ಬಗ್ಗೆ ವಿವರಣೆ ನೀಡಿದ್ದು, ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಪಾಲಿಕೆ ಸೇರಿದಂತೆ ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯ ತಯಾರಿಯ ಬಗ್ಗೆ ಸುದೀರ್ಘ ವಿವರಣೆ ನೀಡಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಬೇರೆ ಕೆಲಸಗಳಾಗುತ್ತಿಲ್ಲ. ಸರ್ಕಾರದ ಅನುದಾನವನ್ನು ಗ್ಯಾರಂಟಿಗಳ ಹೆಸರಿನಲ್ಲಿ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಚುನಾವಣೆ ಎದುರಾದರೆ ಕಾರ್ಯಕರ್ತರು ಕೈ, ಬಾಯಿ ನೋಡುತ್ತಾರೆ. ಎಲ್ಲಿಂದ ಅವರಿಗೆ ಸಂಪನ್ಮೂಲ ಒದಗಿಸುವುದು ಎಂಬ ಪ್ರಶ್ನೆಯನ್ನು ಬಹುತೇಕ ಶಾಸಕರು ಹೈಕಮಾಂಡ್ ನಾಯಕರ ಮುಂದಿಟ್ಟಿದ್ದಾರೆ.
ಹೇಗಾದರೂ ಮಾಡಿ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲ ಒದಗಿಸದೇ ಇದ್ದರೆ ಕಾರ್ಯಕರ್ತರನ್ನು ಸಮಾಧಾನಪಡಿಸಿ ಚುನಾವಣೆ ನಡೆಸಲು ಕಷ್ಟಸಾಧ್ಯವಾಗಲಿದೆ. ಒಂದು ವೇಳೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ನಮ್ಮನ್ನು ಹೊಣೆ ಮಾಡಬೇಡಿ ಎಂದು ಶಾಸಕರು ಸುರ್ಜೇವಾಲ ಅವರ ಬಳಿ ಹೇಳಿಕೊಂಡಿದ್ದಾರೆ.ಗ್ಯಾರಂಟಿ ಯೋಜನೆಗಳು ಹೆಚ್ಚು ಜನರಿಗೆ ತಲುಪುತ್ತವೆ. ಆದರೆ ಅವುಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗುತ್ತಿಲ್ಲ. ಯೋಜನೆಗಳ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ಸರ್ಕಾರ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಯಶಸ್ವಿಯಾಗಿಲ್ಲ.
ಗ್ಯಾರಂಟಿ ಸಮಿತಿಯಲ್ಲಿರುವ ಪದಾಧಿಕಾರಿಗಳು ಸರ್ಕಾರದ ಸೌಲಭ್ಯ ಪಡೆದು ಖುಷಿಯಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ನಾವು ಮನ್ನಣೆ ನೀಡಲಾಗಿಲ್ಲ. ಎರಡು ವರ್ಷ ಕಳೆದರೂ ನಿಗಮ ಮಂಡಳಿಗಳಿಗೆ ಸದಸ್ಯರು, ನಿರ್ದೇಶಕರನ್ನು ನೇಮಿಸಿಲ್ಲ. ಅಧ್ಯಕ್ಷರು, ಉಪಾಧ್ಯಕ್ಷರ ಮೊದಲ ಅವಧಿ ಮುಗಿಯುತ್ತಾ ಬಂದಿದೆ. ಇನ್ಯಾವ ಮುಖ ಇಟ್ಟುಕೊಂಡು ನಾವು ಚುನಾವಣೆಯಲ್ಲಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಲು ಸಾಧ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಾರ್ಯಕರ್ತರ ಸಣ್ಣಪುಟ್ಟ ಕೆಲಸಗಳಿಗೂ ಸಚಿವರು ಸ್ಪಂದಿಸುತ್ತಿಲ್ಲ. ಮಧ್ಯವರ್ತಿಗಳು, ಗುತ್ತಿಗೆದಾರರು ಹಾಗೂ ಅನಪೇಕ್ಷಿತ ಮಹಿಳೆಯ ಓಡಾಟ ವಿಧಾನಸೌಧದಲ್ಲಿ ಹೆಚ್ಚಾಗಿದೆ. ಕಾರ್ಯಕರ್ತರಿಗೆ ಗೌರವ ಇಲ್ಲದಂತಾಗಿದೆ. ಸಚಿವರು ಶಾಸಕರನ್ನೇ ಪರಿಗಣಿಸುತ್ತಿಲ್ಲ, ಇನ್ನು ಕಾರ್ಯಕರ್ತರ ಪರಿಸ್ಥಿತಿ ಹೇಳತೀರದು.
140ಕ್ಕೂ ಹೆಚ್ಚು ಶಾಸಕರ ಸಂಖ್ಯಾಬಲವಿದೆ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಅಹಂನ ಆಡಳಿತ ನಡೆಯುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. 56 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಮೊತ್ತ ವಿನಿಯೋಗಿಸುತ್ತಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಸರಿಯಾದ ಪ್ರಚಾರ ಇಲ್ಲ. ಫಲಾನುಭವಿಗಳಲ್ಲಿ ಸರ್ಕಾರದ ಬಗ್ಗೆ ಕೃತಜ್ಞತಾ ಭಾವ ಇಲ್ಲದಂತಹ ವಾತಾವರಣ ಇದೆ.
ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವು ಸಚಿವರ ಸಾರ್ವಜನಿಕ ವರ್ತನೆಗಳು ಉದ್ದಟತನ ಮೀರಿವೆ ಎಂದು ಶಾಸಕರು ಸುರ್ಜೇವಾಲ ಮುಂದೆ ದೂರುಗಳ ಸರಮಾಲೆಯನ್ನೇ ಪೋಣಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟೂ ಮಾಹಿತಿಯನ್ನು ಲಿಖಿತ ರೂಪದಲ್ಲಿ ಸಂಗ್ರಹಿಸಿರುವ ಸುರ್ಜೇವಾಲ ದೆಹಲಿಯಲ್ಲಿಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಜೊತೆಗಿನ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.
ಈ ನಡುವೆ ರಾಹುಲ್ ಗಾಂಧಿಯವರ ಭೇಟಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಸಮಯ ಕೇಳಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟದ ಪುನರ್ರಚನೆ ವದಂತಿಗಳ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಸಭೆ ಮಹತ್ವ ಪಡೆದುಕೊಂಡಿದೆ.
- ಸಿದ್ದರಾಮಯ್ಯನವರೇ ಸಿಎಂ ಆಗಿ ಸಿದ್ದು ಮುಂದುವರೆಯುತ್ತಾರೆ : ಪುತ್ರ ಯತೀಂದ್ರ
- ಪಾಲಿಕೆಗಳ ನೌಕರರ ಕಷ್ಟಗಳನ್ನೂ ಕೇಳಿಸಿಕೊಳ್ಳಿ : ರಾಜ್ಯ ಸರ್ಕಾರಕ್ಕೆ HDK ಆಗ್ರಹ
- ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟದ ಭಾಗ್ಯ
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಚೋರನ ಬಂಧನ
- ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್ ನಡೆಸಲು ಮಾತ್ರ ಯೋಗ್ಯರು : ಶಿವಸೇನೆ ಶಾಸಕ ಗಾಯಕ್ವಾಡ್