ಬೆಂಗಳೂರು,ಸೆ.20- ಸೋಮವಾರದಿಂದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಆರಂಭವಾಗುವ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಒಕ್ಕಲಿಗ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳ ಮಹತ್ವದ ಸಮಾಲೋಚನಾ ಸಭೆ ನಡೆಸಲಾಯಿತು.
ಜಾತಿಗಣತಿ ವಿಚಾರದಲ್ಲಿ ಸಾಕಷ್ಟು ಸಂಘರ್ಷ, ವಿವಾದಗಳು ತಲೆದೋರಿರುವ ಬೆನ್ನಲ್ಲೇ ಒಕ್ಕಲಿಗರ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಮುಖಂಡರು, ಸಂಘ ಸಂಸ್ಥೆಗಳು ಒಗ್ಗೂಡಿ ಸಮಾಲೋಚನೆ ನಡೆಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಯಿತು. ಜನಾಂಗದ ಹಿತ ಕಾಪಾಡಲು ಈ ಸಮೀಕ್ಷೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ವಿಜಯನಗರದ ಆದಿಚುಂಚನಗಿರಿ ಮಠದ ಸಮುದಾಯ ಭವನದಲ್ಲಿ ಇಂದು ನಡೆದ ಈ ಸಭೆಯಲ್ಲಿ ಪಟ್ಟನಾಯ್ಕನಹಳ್ಳಿಯ ಸ್ಪಟಿಕಪುರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಡಾ.ಕೆ.ಸುಧಾಕರ್, ಶಾಸಕರಾದ ಅರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಟಿ.ಬಿ.ಜಯಚಂದ್ರ, ಶರತ್ ಬಚ್ಚೇಗೌಡ, ಸತೀಶ್ ರೆಡ್ಡಿ, ಜಿ.ಟಿ.ದೇವೇಗೌಡ, ಡಾ.ರಂಗನಾಥ್, ಸುರೇಶ್ ಗೌಡ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ರವಿಕುಮಾರ್, ಗುಬ್ಬಿ ಶ್ರೀನಿವಾಸ್, ಎಚ್.ಸಿ.ಬಾಲಕೃಷ್ಣ, ಡಾ.ರಂಗನಾಥ್, ರವಿ ಗಣಿಗ, ಉದಯ್, ಪುಟ್ಟಣ್ಣ, ಮಾಜಿ ಶಾಸಕರಾದ ರಾಮಚಂದ್ರಗೌಡ, ಡಿ.ಸಿ.ತಮ್ಮಣ್ಣ, ಕೆ.ಜಿ.ಬೋಪಯ್ಯ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಲು ಈಗಾಗಲೇ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಒಕ್ಕಲಿಗ ಜನಾಂಗದವರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿತ್ತು. ಸಮುದಾಯದವರು ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಎಲ್ಲರೂ ವಾಸ್ತವ ಮಾಹಿತಿಗಳನ್ನು ನೀಡಬೇಕು ಎಂಬ ವಿಚಾರದಲ್ಲಿ ಸಮಾಲೋಚನೆ ನಡೆಸಲಾಯಿತು.
ಈ ಬಗ್ಗೆ ಜನಾಂಗದವರಲ್ಲಿ ಸೂಕ್ತ ತಿಳಿವಳಿಕೆ ನೀಡಿ ವಸ್ತುನಿಷ್ಠ ಮಾಹಿತಿಯನ್ನು ನೀಡುವಂತೆ ಕರೆ ನೀಡಲಾಯಿತು.ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುವ ದತ್ತಾಂಶಗಳು ಸರ್ಕಾರದ ನೀತಿ ನಿರೂಪಣೆ, ಕಾರ್ಯಕ್ರಮ ಆಯೋಜನೆ, ಮೀಸಲಾತಿ ನಿರ್ಧಾರ ಮಾಡಲು ಪರಿಗಣಿತವಾಗುವ ಸಾಧ್ಯತೆ ಇರುವುದರಿಂದ ಜಾಗೃತರಾಗಿ ನೈಜ ಮಾಹಿತಿಗಳನ್ನು ನೀಡುವಂತೆ ಮನವಿ ಮಾಡಲಾಯಿತು.
ಈ ಬಗ್ಗೆ ಜನಾಂಗದವರು, ಸಂಘ ಸಂಸ್ಥೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅರಿವು ಮೂಡಿಸಿ ಎಲ್ಲರೂ ಗಣತಿ ವ್ಯಾಪ್ತಿಗೆ ಒಳಪಡುವಂತೆ ಮಾಡಲು ನಿರ್ಧರಿಸಲಾಯಿತು.ಒಟ್ಟಾರೆ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಲು ತೀರ್ಮಾನಿಸಲಾಗಿದ್ದು, ಉಪಜಾತಿ ಕಾಲಂನಲ್ಲಿ ಅವರವರ ಉಪಜಾತಿಯನ್ನು ಬರೆಸಿಕೊಳ್ಳಲು ಸಲಹೆ ನೀಡಲಾಗಿದೆ.ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸುವುದರಿಂದ ಸಮುದಾಯದಲ್ಲಿ ಒಗ್ಗಟ್ಟು ಮೂಡುತ್ತದೆ. ಅಲ್ಲದೆ, ಸಮುದಾಯದ ನಿರ್ದಿಷ್ಟ ಜನಸಂಖ್ಯೆಯೂ ತಿಳಿಯುತ್ತದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.