Monday, January 27, 2025
Homeರಾಷ್ಟ್ರೀಯ | Nationalಫೆಬ್ರವರಿಯಲ್ಲಿ ತಿರುಪತಿ ತೆರಳುವವರಿಗೆ ಮಹತ್ವದ ಸುದ್ದಿ

ಫೆಬ್ರವರಿಯಲ್ಲಿ ತಿರುಪತಿ ತೆರಳುವವರಿಗೆ ಮಹತ್ವದ ಸುದ್ದಿ

Important news for those going to Tirupati in February

ಹೈದರಾಬಾದ್‌,ಜ.26- ತಿರುಪತಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಮೂರು ದಿನ ಭಕ್ತರಿಗೆ ಸರ್ವ ದರ್ಶನ ಟೋಕನ್‌ ನೀಡಲಾಗುವುದಿಲ್ಲ. ಹೀಗಾಗಿ ಭಕ್ತರು ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಟಿಟಿಡಿ ಮನವಿ ಮಾಡಿದೆ.

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸರ್ವ ದರ್ಶನ ಟೋಕನ್‌ ಪಡೆದು ಸ್ವಾಮಿಯ ದರ್ಶನ ಪಡೆಯುತ್ತಾರೆ. ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ತಿರುಮಲ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ರಥ ಸಪ್ತಮಿಯ ವ್ಯವಸ್ಥೆಗಳ ಬಗ್ಗೆ ಗಮನಹರಿಸುತ್ತಿದ್ದಾರೆ. ತಿರುಮಲದಲ್ಲಿ ರಥಸಪ್ತಮಿ ಆಚರಣೆಯು ಮಿನಿ ಬ್ರಹೋತ್ಸವದ ಶೈಲಿಯಲ್ಲಿ ನಡೆಯಲಿದೆ. ಈ ಸಮಯದಲ್ಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ರಥಸಪ್ತಮಿ ಆಚರಣೆಗೆ ಸಂಬಂಧಿಸಿದಂತೆ ಫೆಬ್ರವರಿ 3ರಿಂದ 5 ರವರೆಗೆ ಅಂದರೆ 3 ದಿನಗಳವರೆಗೆ ತಿರುಪತಿಯಲ್ಲಿ ಸ್ಲಾಟೆಡ್‌ ಸರ್ವ ದರ್ಶನ ಟೋಕನ್ಗಳನ್ನು ನೀಡಲಾಗುವುದಿಲ್ಲ. ಭಕ್ತರು ತಿರುಮಲ ದರ್ಶನಕ್ಕೆ ಅನುಗುಣವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಜೊತೆಗೆ ರಥಸಪ್ತಮಿಯ ಸಂದರ್ಭದಲ್ಲಿ ತಿರುಮಲದಲ್ಲಿ ಅನೇಕ ಸೇವೆಗಳು ಮತ್ತು ದರ್ಶನಗಳನ್ನು ರದ್ದುಗೊಳಿಸಲಾಗುತ್ತದೆ.

ರಥಸಪ್ತಮಿ ಆಚರಣೆಯ ಸಮಯದಲ್ಲಿ ತಿರುಮಲ ದೇವರಿಗೆ ನಿಯಮಿತವಾಗಿ ನಡೆಸಲಾಗುವ ಅಷ್ಟದಳ ಪಾದ ಪದಾರಾಧನೆ, ಕಲ್ಯಾಣೋತ್ಸವ, ಊಂಜಲ್‌ ಸೇವೆ, ಅರ್ಜಿತ ಬ್ರಹೋತ್ಸವ ಮತ್ತು ಸಹಸ್ರ ದೀಪಾಲಂಕಾರ ಇತ್ಯಾದಿ ಸೇವೆಗಳನ್ನು ರದ್ದುಗೊಳಿಸಲಾಗುವುದು. ಈ ಸಮಯದಲ್ಲಿ ಅನಿವಾಸಿ ಭಾರತೀಯರು (ಎನ್‌ಆರ್‌ಐ), ಚಿಕ್ಕ ಮಕ್ಕಳ ಪೋಷಕರು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ನೀಡಲಾಗುವ ವಿಶೇಷ ದರ್ಶನಗಳು ಲಭ್ಯವಿರುವುದಿಲ್ಲ ಎಂದು ಟಿಟಿಡಿ ಇಒ ಸ್ಪಷ್ಟಪಡಿಸಿದ್ದಾರೆ.

ರಥಸಪ್ತಮಿ ಆಚರಣೆಯ ಸಮಯದಲ್ಲಿ ಶಿಷ್ಟಾಚಾರವಿರುವ ವಿಐಪಿ ಬ್ರೇಕ್‌ ದರ್ಶನಗಳನ್ನು ಹೊರತುಪಡಿಸಿ ಉಳಿದೆಲ್ಲವೂ ರದ್ದುಗೊಳ್ಳುತ್ತವೆ. ಮತ್ತೊಂದೆಡೆ ಫೆಬ್ರವರಿ 3ರಂದು ವಿರಾಮ ದರ್ಶನಗಳಿಗೆ ಸಂಬಂಧಿಸಿದಂತೆ ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

300 ರೂ.ಗಳ ವಿಶೇಷ ಪ್ರವೇಶ ದರ್ಶನ ಟೋಕನ್ಗಳನ್ನು ಹೊಂದಿರುವ ಭಕ್ತರು ಸರತಿ ಸಾಲಿನಲ್ಲಿ ದೀರ್ಘಕಾಲ ಕಾಯುವುದನ್ನು ತಪ್ಪಿಸಲು ನಿಗದಿತ ಸಮಯದಲ್ಲಿ ಮಾತ್ರ ವೈಕುಂಠಂ ಕ್ಯೂ ಕಾಂಪ್ಲೆಕ್‌್ಸನಲ್ಲಿ ವರದಿ ಮಾಡಿಕೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಸಲಹೆ ನೀಡಿದ್ದಾರೆ.

ಇನ್ನೂ ರಥಸಪ್ತಮಿ ಆಚರಣೆ ಹಿನ್ನೆಲೆಯಲ್ಲಿ ಟಿಟಿಡಿ ಇಒ ಶ್ಯಾಮಲಾ ರಾವ್‌, ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ತಿರುಮಲದಲ್ಲಿ ರಥಸಪ್ತಮಿ ಆಚರಣೆಯ ವ್ಯವಸ್ಥೆಗಳ ಕುರಿತು ಅನ್ನಮಯ್ಯ ಭವನದಲ್ಲಿ ಪರಿಶೀಲನೆ ನಡೆಸಿದರು.

ರಥ ಸಪ್ತಮಿಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಭಕ್ತರು ಪ್ರವೇಶಿಸುವ ಮತ್ತು ನಿರ್ಗಮಿಸುವ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ.

ಇತ್ತೀಚೆಗೆ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಭಕ್ತರು ಸಾವನ್ನಪ್ಪಿದ್ದು, ತೀವ್ರ ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ತಿರುಪತಿಯಲ್ಲಿ ಜನವರಿ 8ರಂದು ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ತಮಿಳುನಾಡಿನ ಮೆಟ್ಟು ಸೇಲಂ ನಿವಾಸಿ ಮಲ್ಲಿಕಾ ಅವರ ಕುಟುಂಬಕ್ಕೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) 25 ಲಕ್ಷ ರೂ. ಪರಿಹಾರ ಹಸ್ತಾಂತರಿಸಿದೆ. ಟಿಟಿಡಿ ಮಂಡಳಿಯ ಸದಸ್ಯರಾದ ನರೇಶ್‌ ಕುಮಾರ್‌, ರಾಮಮೂರ್ತಿ, ಶಾಂತಾರಾಮ್‌ ಮತ್ತು ಕೃಷ್ಣಮೂರ್ತಿ ಅವರು ಶುಕ್ರವಾರ ಮಲ್ಲಿಕಾ ಅವರ ಏಕೈಕ ಪುತ್ರ ರಮೇಶ್‌ ಅವರಿಗೆ ಪರಿಹಾರ ಚೆಕ್‌ ಅನ್ನು ಹಸ್ತಾಂತರಿಸಿದ್ದಾರೆ.

RELATED ARTICLES

Latest News