ಶ್ರೀನಗರ,ಸೆ.25– ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಉಗ್ರರಿಗೆ ಸಹಾಯ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು 26 ವರ್ಷದ ಮೊಹಮದ್ ಯೂಸುಫ್ ಕಟಾರಿ ಎಂದು ಗುರುತಿಸಲಾಗಿದೆ. ಗುಪ್ತಚರ ಮಾಹಿತಿ ಮೇರೆಗೆ ದಕ್ಷಿಣ ಕಾಶೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಟಾರಿಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಜಮು-ಕಾಶೀರದ ಪೊಲೀಸರು ಕಟಾರಿ ಬಗ್ಗೆ ಹಲವು ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.
ಯೂಸೂಫ್ ಕಟಾರಿ ಯಾರು? :
ಕುಲ್ಗಾಮ್ ಜಿಲ್ಲೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕಟಾರಿ, ಶಿಕ್ಷಕನಾಗಿಯೂ ಕೆಲಸ ಮಾಡ್ತಿದ್ದ. ಈತ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದ ಎನ್ನುವುದು ಗೊತ್ತಾಗಿದೆ.
ಪಹಲ್ಗಾಮ್ ಉಗ್ರರನ್ನು ಕೆಲ ದಿನಗಳ ಹಿಂದೆ ನಡೆದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಚಿನಾರ್ ಕಾರ್ಪ್ಸ್ ಬೆಟಾಲಿಯನ್ ಹತ್ಯೆಗೈದಿತ್ತು. ಆ ಬಳಿಕ ಉಗ್ರರಿಗೆ ಸೇರಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೆಲ್ಲದರ ವಿಶ್ಲೇಷಣೆಯ ಬಳಿಕ ಕಟಾರಿಯನ್ನು ಬಂಧಿಸಲಾಗಿದೆ.
ಮೇ 22ರಿಂದ 2-3 ವಾರಗಳ ಕಾಲ ಸತತವಾಗಿ ಆಪರೇಷನ್ ಮಹಾದೇವ್ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಶ್ರೀನಗರ ಬಳಿಯ ದಚಿಗಮ್ ಅರಣ್ಯ ಪ್ರದೇಶದಲ್ಲಿ ಉಗ್ರರನ್ನು ಹತ್ಯೆಗೈಯಲಾಗಿತ್ತು. ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಭಯೋತ್ಪಾದಕರು ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದರು.
ಹತ್ಯೆಗೀಡಾದ ಉಗ್ರರ ಬಳಿಯಿದ್ದ ಎಕೆ-47 ರೈಫಲ್ ಹಾಗೂ ಎಂ -9 ಅಸಾಲ್ಟ್ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಆ ರೈಫಲ್‌ಗಳನ್ನು ಪಹಲ್ಗಾಮ್ ದಾಳಿಯಲ್ಲಿ ಬಳಕೆ ಮಾಡಲಾಗಿದೆ ಎನ್ನುವುದು ಚಂಡೀಗಢದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ ಬಳಿಕ ಗೊತ್ತಾಗಿದೆ.