ಬೆಂಗಳೂರು,ಮಾ.12- ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನಗಳ ಆದಾಯವನ್ನು ಸರ್ಕಾರ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎ ಗ್ರೇಡ್‌ನಿಂದ 8 ಕೋಟಿ ಆದಾಯ ಬರುತ್ತದೆ. ಈ ಹಣವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆಯೇ ವಿನಃ ಅನ್ಯ ಕಾರ್ಯಗಳಿಗೆ ಬಳಕೆ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.
ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಅಧ್ಯಕ್ಷರು, 8 ಜನ ಸಮಿತಿ ಸದಸ್ಯರು ಹಾಗೂ ಅರ್ಚಕರು ಇರುತ್ತಾರೆ. ದೇವಸ್ಥಾನಗಳಿಂದ ಬರುವ ಆದಾಯವನ್ನು ಅವರೇ ಹೇಗೆ ವ್ಯಯಿಸಬೇಕು ಎಂಬುದನ್ನು ಚರ್ಚೆ ಮಾಡುತ್ತಾರೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಎ, ಬಿ ಮತ್ತು ಸಿ ಗ್ರೇಡ್‌ಗಳಾಗಿ ವಿಂಗಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,86,000 ದೇವಸ್ಥಾನಗಳಿವೆ. ಇದರಲ್ಲಿ ಎ ವರ್ಗದ 205, ಬಿ ವರ್ಗದ 193 ಹಾಗೂ ಸಿ ವರ್ಗದ 34,166 ದೇವಸ್ಥಾನಗಳಿವೆ ಎಂದು ವಿವರಿಸಿದರು.
5 ಕೋಟಿಗಿಂತ ಹೆಚ್ಚು ಆದಾಯವಿದ್ದರೆ ಎ ಗ್ರೇಡ್, 2 ಕೋಟಿಯೊಳಗಿದ್ದರೆ ಬಿ ಗ್ರೇಡ್ ಹಾಗೂ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ಸಿ ಗ್ರೇಡ್ ಎಂದು ವರ್ಗಾಯಿಸಲಾಗುತ್ತದೆ. ದೇವಸ್ಥಾನಗಳಿಗೆ ಭಕ್ತರಿಂದ ಬರುವ ಆದಾಯವನ್ನು ಆಡಳಿತ ಮಂಡಳಿಯವರೇ ನಿರ್ವಹಣೆ ಮಾಡುವುದರಿಂದ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.