Saturday, February 1, 2025
Homeರಾಷ್ಟ್ರೀಯ | Nationalಮಧ್ಯಮವರ್ಗದ ಜನರ ತೆರಿಗೆ ಹೊರೆ ಇಳಿಸಿದ ಕೇಂದ್ರ ಬಜೆಟ್

ಮಧ್ಯಮವರ್ಗದ ಜನರ ತೆರಿಗೆ ಹೊರೆ ಇಳಿಸಿದ ಕೇಂದ್ರ ಬಜೆಟ್

Income Tax Slabs Budget 2025

ನವದೆಹಲಿ,ಫೆ.1- ವಿಕಸಿತ ಭಾರತದ ಭವ್ಯ ಕನಸಿನೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್‌ನಲ್ಲಿ ತಮ 8ನೇ ಬಜೆಟ್‌ ಅನ್ನು ಮಂಡಿಸಿದರು. ಬಡತನ ಶೂನ್ಯತೆ, ಶೇ.100 ರಷ್ಟು ಗುಣಮಟ್ಟ, ಉತ್ತಮ ಶಾಲಾ ಶಿಕ್ಷಣ, ಎಲ್ಲರಿಗೂ ಸಮಗ್ರ ಕೈಗೆಟಕುವ ಹಾಗೂ ಗುಣಮಟ್ಟದ ವೈದ್ಯಕೀಯ ಕಾಳಜಿ, ಶೇ.100ರಷ್ಟು ಕೌಶಲ್ಯಭರಿತ ದುಡಿಯುವ ವರ್ಗ ಮತ್ತು ಅರ್ಥಪೂರ್ಣ ಉದ್ಯೋಗ, ಶೇ.70ರಷ್ಟು ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ಭಾರತವನ್ನು ವಿಶ್ವದ ಆಹಾರ ಬುಟ್ಟಿಯನ್ನಾಗಿ ಪರಿವರ್ತಿಸುವ ಮಹದುದ್ದೇಶವನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ತಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರಮುಖವಾಗಿ ಬಡತನ, ಯುವಸಮುದಾಯ, ಕೃಷಿಕರು ಹಾಗೂ ಮಹಿಳೆಯರನ್ನು ಕೇಂದ್ರೀಕರಿಸಿರುವ ನಿರ್ಮಲಾ ಸೀತಾರಾಮನ್‌ 10 ಪ್ರಮುಖ ವಲಯಗಳನ್ನು ಗುರುತಿಸಿದ್ದಾರೆ.

ಆದಾಯ ತೆರಿಗೆ ಮಿತಿಯಲ್ಲಿ 2014 ರಿಂದಲೂ ಪರಿಷ್ಕರಣೆ ಮಾಡಲಾಗುತ್ತಿದೆ. ಮೊದಲು 2.5 ಲಕ್ಷ ಮಿತಿಯಷ್ಟಿದ್ದ ಆದಾಯ ತೆರಿಗೆಯನ್ನು 5 ಲಕ್ಷಕ್ಕೆ ಅನಂತರ 7 ಲಕ್ಷಕ್ಕೆ ಪರಿಷ್ಕರಣೆ ಮಾಡಲಾಯಿತು. ಈಗ ಹೊಸ ತೆರಿಗೆ ಪಾವತಿ ಹಂತದಲ್ಲಿ ಆದಾಯ ತೆರಿಗೆ ನಿಧಿಯನ್ನು 12 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಮಾಸಿಕ 1 ಲಕ್ಷ ಆದಾಯ ಇರುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ. ವೇತನದಾರರ ತೆರಿಗೆ ಮಿತಿ 12.75 ಲಕ್ಷ ಎಂದು ಸಚಿವರು ತಿಳಿಸಿದ್ದಾರೆ.

ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಅನುಮೋದನೆ ಪಡೆದರು. ಈ ವೇಳೆ ರಾಷ್ಟ್ರಪತಿಯವರು ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರಿನಿಂದ ಮಾಡಿದ ಸಿಹಿಯನ್ನು ತಿನ್ನಿಸಿ ಶುಭ ಹಾರೈಸಿದರು. ನಂತರ ಲೋಕಸಭೆಯಲ್ಲಿ ಬಜೆಟ್‌ ಮಂಡನೆಗೆ  ಅಧ್ಯಕ್ಷ ಓಂಬಿರ್ಲಾ ಅವಕಾಶ ಮಾಡಿಕೊಟ್ಟರು. ವಿರೋಧಪಕ್ಷಗಳು ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತದ ಪ್ರಕರಣವನ್ನು ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಗದ್ದಲ ಎಬ್ಬಿಸಿ ಸಭಾತ್ಯಾಗ ಮಾಡಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2 ಭಾಗಗಳಲ್ಲಿರುವ 55 ಪುಟಗಳ ಬಜೆಟ್‌ ಪ್ರತಿಯನ್ನು ಓದಿದರು.ವೇಗದ ಅಭಿವೃದ್ಧಿ, ಭದ್ರತೆಯನ್ನೊಳಗೊಂಡ ಬೆಳವಣಿಗೆ, ಖಾಸಗಿ ಕ್ಷೇತ್ರದ ಹೂಡಿಕೆ ಹೆಚ್ಚಿಸುವುದು, ಗೃಹೋಪಯೋಗಿ ಭಾವನೆಗಳನ್ನು ಎತ್ತಿಹಿಡಿಯುವುದು, ಭಾರತದ ಮಧ್ಯಮ ವರ್ಗದ ಖರ್ಚಿನ ಸಾಮರ್ಥ್ಯದ ಅಭಿವೃದ್ಧಿಯ ಶಪಥ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಅತ್ಯದ್ಭುತ ಸಮೃದ್ಧಿ, ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲು ಶ್ರಮಿಸಬೇಕಿದೆ ಎಂದು ಹೇಳಿದರು.

ಜಾಗತಿಕವಾಗಿ ಭೌಗೋಳಿಕ ರಾಜಕೀಯ ಸಂಘರ್ಷದಿಂದ ಆರ್ಥಿಕ ಹಿನ್ನಡೆಯ ನಡುವೆಯೂ ನಮ ದೇಶ ವಿಕಸಿತ ಭಾರತದತ್ತ ಮುನ್ನುಗ್ಗುತ್ತಿದೆ. ಕಳೆದ 10 ವರ್ಷಗಳಲ್ಲಿ ದಾಖಲಾರ್ಹ ಅಭಿವೃದ್ಧಿ ಸಾಧಿಸಿದೆ. ಮುಂದಿನ 5 ವರ್ಷಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಬ್‌ ಕ ವಿಕಾಸ್‌‍ ಅಪರೂಪದ ಅವಕಾಶಗಳು ತೆರೆದುಕೊಳ್ಳಲಿವೆ ಎಂದರು.ಜಾಗತಿಕವಾಗಿ ನಮ ಸಾಮರ್ಥ್ಯದ ಅಭಿವೃದ್ಧಿ ಮತ್ತು ಸ್ಪರ್ಧಾತಕ ಸವಾಲಿಗೆ ತೆರಿಗೆ ಸುಧಾರಣೆ, ಇಂಧನ ಕ್ಷೇತ್ರ, ನಗರಾಭಿವೃದ್ಧಿ, ಗಣಿಗಾರಿಕೆ, ಆರ್ಥಿಕ ವಲಯ ಮತ್ತು ನಿಯಂತ್ರಣಾ ಸುಧಾರಣೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು.

ಅಭಿವೃದ್ಧಿಗೆ ಕೃಷಿ, ಗ್ರಾಮೀಣಾಭಿವೃದ್ಧಿ, ತೈಲ ಬೀಜ ಹಾಗೂ ಇತರ ಧಾನ್ಯಗಳ ಆತ ನಿರ್ಭರ್‌ ಭಾರತ್‌, ತರಕಾರಿ ಮತ್ತು ಹಣ್ಣು ಉತ್ಪಾದನೆಯಲ್ಲಿ ಸುಧಾರಣೆ, ಬಿಹಾರದಲ್ಲಿ ಮಕಾನ್‌ ಬೋರ್ಡ್‌ ಸ್ಥಾಪನೆ, ರಾಷ್ಟ್ರೀಯ ಹೆಚ್ಚು ಇಳುವರಿ ಬೀಜಗಳ ಕಾರ್ಯಯೋಜನೆಯಂತಹ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.ಮೀನುಗಾರಿಕೆ, ಹತ್ತಿ ಉತ್ಪಾದನೆಗೂ ಗಮನ ನೀಡಲಾಗಿದ್ದು, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳ ಕಿರು ಸಾಲ ಮಿತಿಯನ್ನು 3 ರಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

ಕೃಷಿ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಉತ್ತೇಜಿಸುವುದು, ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ನಿರ್ಮಾಣ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ ಹಾದಿ ನಿರ್ಮಾಣ, ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳನ್ನು ಬೆಂಬಲಿಸುವುದು, ಉದ್ಯೋಗ ಆಧಾರಿತ ಅಭಿವೃದ್ಧಿಗೆ ಬೆಂಬಲಿಸುವುದು, ಜನರ ಆರ್ಥಿಕ ತೆಯ ಹೂಡಿಕೆಯಲ್ಲಿ ನಾವಿನ್ಯತೆ ಮತ್ತು ಸುರಕ್ಷತೆ, ಇಂಧನ ಪೂರೈಕೆಯ ಖಾತ್ರಿ, ರಫ್ತು ಉತ್ತೇಜನ, ಸಮೃದ್ಧ ಪೌಷ್ಠಿಕತೆ ಸೇರಿ 10 ಆದ್ಯತಾ ವಲಯಗಳನ್ನು ನಿರ್ಮಲಾ ಸೀತಾರಾಮನ್‌ ಕೇಂದ್ರೀಕರಿಸಿದ್ದಾರೆ.

ಉದ್ಯಮ ವಲಯವನ್ನು ಸದೃಢಗೊಳಿಸಲು ಹೊಸ ನಿಧಿ ಸ್ಥಾಪಿಸಿದ್ದು, ನವೋದ್ಯಮಗಳಿಗಾಗಿ ಪ್ರತ್ಯೇಕ ಅನುದಾನ ಮೀಸಲಿರಿಸಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ 10 ಸಾವಿರ ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ ಸರ್ಕಾರ 10 ಸಾವಿರ ಕೋಟಿ ರೂ.ಗಳನ್ನು ಒದಗಿಸುತ್ತಿದೆ. ಮೊದಲ ಬಾರಿಗೆ ಉದ್ಯಮಿಯಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ 5 ಲಕ್ಷ ರೂ. ನೀಡುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ಎಂಎಸ್‌‍ಎಂಇಗಳಿಗೆ ಸಾಲಭದ್ರತೆ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಸೂಕ್ಷ್ಮ ಉದ್ಯಮಗಳಿಗಾಗಿ ಕ್ರೆಡಿಟ್‌ಕಾರ್ಡ್‌ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಉದ್ಯಮ ವಲಯದಲ್ಲಿ ನೋಂದಾಯಿತರಾದವರಿಗೆ 5 ಲಕ್ಷ ರೂ. ಸಾಲ ಮಿತಿಯೊಂದಿಗೆ 10 ಲಕ್ಷ ರೂ. ಕಸ್ಟಮೈಸ್ಡ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಮೊದಲ ವರ್ಷದಲ್ಲಿ ವಿತರಿಸುವುದಾಗಿ ತಿಳಿಸಿದ್ದಾರೆ.ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ನೀಡುವ ಸಾಲವನ್ನು 5 ರಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಮುಂದಿನ ಐದೂವರೆ ವರ್ಷ 1.50 ಲಕ್ಷ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದಾರೆ.

27 ಆದ್ಯತಾ ವಲಯದ ನವೋದ್ಯಮಗಳಿಗೆ 10 ರಿಂದ 20 ಕೋಟಿ ರೂ. ನೆರವು, ಖಾತ್ರಿ ಶುಲ್ಕವನ್ನು ಶೇ.1 ರಷ್ಟು ಕಡಿಮೆ ಮಾಡಲಾಗಿದೆ. ಎಂಎಸ್‌‍ಎಂಇ ವಲಯದ ಹೂಡಿಕೆಯಲ್ಲಿ 2 ರೀತಿಯ ವರ್ಗೀಕರಣ ಮಾಡಲಾಗಿದ್ದು, ಹೂಡಿಕೆಯ ಪ್ರಮಾಣವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. ಹಾಗೆಯೇ ವಹಿವಾಟಿನ ಮಿತಿಯನ್ನೂ ದುಪ್ಪಟ್ಟುಗೊಳಿಸಲಾಗಿದೆ.

ಸೂಕ್ಷ್ಮ ಉದ್ಯಮವಲಯದಲ್ಲಿ ಹೂಡಿಕೆಯ ಮಿತಿ ಪ್ರಸ್ತುತ 1 ಕೋಟಿ ರೂ.ಗಳಿದ್ದು ಅದನ್ನು 2.50 ಕೋಟಿ ರೂ.ಗೆ ವಿಸ್ತರಿಸಲಾಗಿದೆ. ವಹಿವಾಟಿನ ಮಿತಿಯನ್ನು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಸಣ್ಣ ಕೈಗಾರಿಕೆಗಳಿಗೆ ಹೂಡಿಕೆಯ ಮಿತಿ 10 ರಿಂದ 25 ಕೋಟಿ ರೂ.ಗೆ, ವಹಿವಾಟು 50 ರಿಂದ 100 ಕೋಟಿ ರೂ.ಗೆ, ಮಧ್ಯಮ ಕೈಗಾರಿಕೆಗಳ ಹೂಡಿಕೆ ಮಿತಿ 50 ರಿಂದ 125 ಕೋಟಿ ರೂ., ವಹಿವಾಟಿನ ಮಿತಿ 150 ರಿಂದ 500 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಭಾರತದಲ್ಲಿ 1 ಕೋಟಿ ರೂ. ನೋಂದಾಯಿತ ಎಂಎಸ್‌‍ಎಂಇಗಳಿಗೂ 7.5 ಕೋಟಿ ಉದ್ಯೋಗಿಗಳಿದ್ದಾರೆ. ರಫ್ತು ವಲಯಕ್ಕೆ ಶೇ.45 ರಷ್ಟು, ಉತ್ಪಾದನಾ ವಲಯಕ್ಕೆ ಶೇ.36ರಷ್ಟು ಪಾಲು ಹೊಂದಿದೆ.ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಉತ್ಪಾದನಾ ಘಟಕವನ್ನು ಅಸ್ಸಾಂನ ನಮ್‌ರೂಪ್‌ನಲ್ಲಿ ಸ್ಥಾಪಿಸಲಾಗುತ್ತದೆ. ಹಾಗೆಯೇ ಈಶಾನ್ಯ ವಲಯದಲ್ಲಿರುವ 3 ಯೂರಿಯಾ ಘಟಕಗಳನ್ನು ಮರು ಆರಂಭಿಸುವುದಾಗಿ ತಿಳಿಸಿದ್ದಾರೆ.

ಎಂಎಸ್‌‍ಎಂಇ, ಹೂಡಿಕೆಯನ್ನು ಕ್ರಮವಾಗಿ 2 ಮತ್ತು 3ನೇ ಇಂಜಿನ್‌ ಎಂದು ನಿರ್ಮಲಾ ಸೀತಾರಾಮನ್‌ ಗುರುತಿಸಿದ್ದಾರೆ. ಆಹಾರ ಸಂಸ್ಕರಣೆ, ಮೇಕ್‌ ಇನ್‌ ಇಂಡಿಯಾದಲ್ಲಿ ದೇಶೀಯ ಉತ್ಪಾದನೆ, ಶುದ್ಧ ತಂತ್ರಜ್ಞಾನ, ಮಕ್ಕಳ ಪೋಷಣೆಗೆ ಅಂಗನವಾಡಿ ಮತ್ತು ಪೋಷಣ್‌ ಅಭಿಯಾನ, ಅಟಲ್‌ ಟಿಂಕ್ರಿಂಗ್‌ ಲ್ಯಾಬ್‌, ಐಐಟಿಗಳ ಸಾಮರ್ಥ್ಯ ವಿಸ್ತರಣೆ, ಅತ್ಯಾಧುನಿಕ ತಂತ್ರಜ್ಞಾನವಾಗಿರುವ ಎಐ ಹಾಗೂ ಡೀಪ್‌ ಟೆಕ್‌ಗಳ ಜೇಷ್ಠತಾ ಕೇಂದ್ರಗಳ ಸ್ಥಾಪನೆ, ವೈದ್ಯಕೀಯ ಸೀಟುಗಳನ್ನು ಹೆಚ್ಚಿಸುವುದು, ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್‌ಗಾಗಿ ಡೇಕೇರ್‌ ಸೆಂಟರ್‌ಗಳ ಸ್ಥಾಪನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ,ಈ ಹಿಂದೆ ಜಾರಿಗೊಳಿಸಲಾಗಿರುವ ಪಿಎಂ ಸ್ವನಿಧಿ, ಜಲಜೀವನ್‌ ಮೆಷಿನ್‌ನಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ಸುಧಾರಿಸುವುದಾಗಿ ಹೇಳಿದ್ದಾರೆ.

RELATED ARTICLES

Latest News