ಬೆಂಗಳೂರು, ಮಾ.3- ರಾಜ್ಯದಲ್ಲಿ ನಾಯಿ ಕಡಿತ ಹಾಗೂ ರೇಬಿಸ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಹುಟ್ಟಿಸಿದೆ. ಆರೋಗ್ಯ ಇಲಾಖೆಯ ನೀಡಿರುವ ಅಂಕಿ ಅಂಶದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ರೇಬಿಸ್ ಸೋಂಕಿನಿಂದ 8 ಮಂದಿ ಮೃತಪಟ್ಟಿದ್ದಾರೆ. ಅದರ ಪೈಕಿ ಮೂರು ಬೆಂಗಳೂರಿನಲ್ಲಿ ಸಂಭವಿಸಿದೆ.
ಹರಿಯಾಣ, ಚಿತ್ರದುರ್ಗ ಹಾಗೂ ತುಮಕೂರು ಮೂಲದ ವ್ಯಕ್ತಿಗಳು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದ ಸಮೀಪದ ಆಸ್ಪತ್ರೆಯೊಂದರಲ್ಲಿ ಈ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. 2025ರ ಫೆಬ್ರವರಿ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಒಟ್ಟು 66489 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ.
ವಿಜಯಪುರದಲ್ಲಿ 4,552 ಮತ್ತು ಬೆಂಗಳೂರಿನಲ್ಲಿ 4072, ಹಾಸನದಲ್ಲಿ 3688 ಪ್ರಕರಣಗಳು ವರದಿಯಾಗಿವೆ.ನಾಯಿ ಕಡಿತ, ಸಾವು ಕಳೆದ ವರ್ಷಕ್ಕಿಂತ ಈ ಭಾರಿ ಹೆಚ್ಚಾಗಿದೆ. ಹೆಚ್ಚುನಾಯಿ ಕಡಿತ ಮತ್ತು ರೇಬಿಸ್ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 47ರಷ್ಟು ಹೆಚ್ಚಾದಂತಾಗಿದೆ.
2024ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಕರ್ನಾಟಕದಲ್ಲಿ 3,61,522 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದರೆ, 42 ಮಂದಿ ಮೃತಪಟ್ಟಿದ್ದರು. ಪ್ರತಿಯೊಂದು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ನಾಯಿ ಕಡಿತ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುತ್ತವೆ.
ಎಲ್ಲಾ ನಾಯಿ ಕಡಿತ ಪ್ರಕರಣಗಳು ರೇಬೀಸ್ ಪ್ರಕರಣಗಳಾಗಿರುವುದಿಲ್ಲ. ಆದರೂ, ನಾಯಿ ಕಚ್ಚಿದ ಸಂದರ್ಭದಲ್ಲಿ ಗಾಯವನ್ನು ನೀರು ಮತ್ತು ಸಾಬೂನಿನಿಂದ ತೊಳೆದು ಶುಚಿಗೊಳಿಸವುದು ಮುಖ್ಯವಾಗಿದೆ. ಇದಲ್ಲದೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವುದು ಅಗತ್ಯ