ಮಂಡ್ಯ,ಜು.14- ತಮಿಳುನಾಡಿಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದ್ದಕ್ಕಿಂತಲೂ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಸಮಿತಿ ಒಂದು ಟಿಎಂಸಿ ಅಂದರೆ 11,500 ಕ್ಯೂಸೆಕ್ ನೀರನ್ನು ಪ್ರತಿದಿನ ಹರಿಸುವಂತೆ ಸೂಚನೆ ನೀಡಿದೆ. ಅದೃಷ್ಟವಶಾತ್ ಕಬಿನಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವಿನ ಪ್ರಮಾಣ 4,500 ಕ್ಯೂಸೆಕ್ಸ್ ಇದೆ.
ಸಹಜವಾಗಿ 18ರಿಂದ 20 ಸಾವಿರ ಕ್ಯೂಸೆಕ್ಸ್ ಹೊರ ಹರಿವಿದೆ. ತಮಿಳುನಾಡಿಗೆ ಯಾವುದೇ ಜಲಾಶಯದಿಂದ ನೀರು ಹರಿದರೂ ಅದು ಪರಿಗಣಿಸಲ್ಪಡುವುದರಿಂದ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾದಂತಾಗಿದೆ ಎಂದು ಹೇಳಿದರು. ಮಳೆ ಇದೇ ರೀತಿ ಮುಂದುವರೆದು 10 ದಿನ ಸರಿದೂಗಿಸಿದರೆ ತಮಿಳುನಾಡಿಗೆ ನೀರು ಹರಿಸಬೇಕಾದ ಈ ತಿಂಗಳ ಕೋಟಾ ಮುಗಿಯುತ್ತದೆ.
ಹೇಮಾವತಿಯಲ್ಲೂ ನೀರಿನ ಸಂಗ್ರಹ ಉತ್ತಮವಾಗಿದೆ. ಆದರೆ ಕೆಆರ್ಎಸ್ಗೆ 11 ಸಾವಿರದಷ್ಟಿದ್ದ ಒಳಹರಿವು 6 ಸಾವಿರ, ನಂತರ ಈಗ 3 ಸಾವಿರ ಕ್ಯೂಸೆಕ್‌್ಸಗೆ ಇಳಿಕೆಯಾಗಿದೆ. ಹೇಮಾವತಿ, ಹಾರಂಗಿ ಜಲಾಶಯಗಳು ನಾಲ್ಕೈದು ದಿನಗಳಲ್ಲಿ ತುಂಬುವ ಅವಕಾಶವಿದೆ ಎಂದು ವಿವರಿಸಿದರು.
ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲುಆರ್ಸಿ ನೀಡಿರುವ ಆದೇಶದ ಜಾರಿಗೆ ಕಾಲಾವಕಾಶ ಕೇಳಿ ಮೇಲನವಿ ಸಲ್ಲಿಸಲು ಚರ್ಚೆಗಳಾಗುತ್ತಿವೆ. ಇನ್ನು ಸುಮಾರು 10 ದಿನಗಳ ಕಾಲ ಮಳೆಯ ಪ್ರಮಾಣವನ್ನು ನೋಡಿಕೊಂಡು ನೀರು ಹರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಕೆಆರ್ಎಸ್ ತುಂಬಿಲ್ಲ. 104 ಅಡಿಯಷ್ಟು ಮಾತ್ರ ನೀರಿದೆ. ಕೆರೆಕಟ್ಟೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಜು.15ರ ನಂತರ ಭತ್ತ ಬೆಳೆಯುವ ಚಟುವಟಿಕೆಗಳು ಶುರುವಾಗಬೇಕಾಗಿತ್ತು. ಆದರೆ ನೀರಿನ ಲಭ್ಯತೆ ಮತ್ತು ಕೊರತೆಯನ್ನು ನೋಡಿಕೊಂಡು ಕೃಷಿ ಮಾಡುವಂತೆ ರೈತರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯ ಮುಂದೆ ರಾಜ್ಯದ ಪರವಾಗಿ ಸರಿಯಾದ ವಾದ ಮಂಡಿಸಿಲ್ಲ ಎಂಬ ಮಾಜಿ ಸಂಸದ ಪುಟ್ಟರಾಜು ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ರಾಜ್ಯ ಲಿಖಿತವಾಗಿಯೇ ವಾದ ಮಂಡಿಸಿದೆ. ತನ್ನ ಇತಿಮತಿಯಲ್ಲಿ ಎಲ್ಲಾ ಮಾಹಿತಿಗಳನ್ನು ಒದಗಿಸಿದೆ. ಆದರೂ ಸಮಿತಿಯ ತೀರ್ಪು ಆಘಾತಕಾರಿಯಾಗಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಕಾವೇರಿ ವಿವಾದ ಬಗೆಹರಿಸುವುದು ತಮ ಆದ್ಯತೆ ಎಂದು ಹೇಳಿ ಪ್ರಚಾರ ಮಾಡಿ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿರುವವರು ಸಂಜೆ ನಡೆಯುವ ಸರ್ವಪಕ್ಷ ಸಭೆಯಲ್ಲಿ ಯಾವ ರೀತಿಯ ಸಲಹೆ ನೀಡುತ್ತಾರೆ ಎಂಬುದನ್ನು ಕಾದುನೋಡುತ್ತೇವೆ ಎಂದು ಹೇಳಿದರು.
ಮಂಡ್ಯದಲ್ಲಿ ಡಿ.21ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಚಿಕ್ಕಮಂಡ್ಯ , ಅಮರಾವತಿ ಹೋಟೆಲ್ ಹಿಂಭಾಗ ಸೇರಿದಂತೆ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಸೂಕ್ತ ಜಾಗವನ್ನು ಶೀಘ್ರವಾಗಿ ಅಖೈರುಗೊಳಿಸುವುದಾಗಿ ಹೇಳಿದರು.
ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ಪತ್ನಿಯ ಹೆಸರಿಲ್ಲಿ ಜಮೀನನ್ನು ಮುಡಾದವರು ಅಕ್ರಮವಾಗಿ ಬಳಕೆ ಮಾಡಿಕೊಂಡು ನಿವೇಶನ ಮಾಡಿ ಮಾರಾಟ ಮಾಡಿದ್ದಾರೆ. ಇದನ್ನು ಒಪ್ಪಿಕೊಂಡು ಬದಲಿ ಜಾಗ ನೀಡಲಾಗಿದೆ. ಜಾಗ ನೀಡಿದ ಸಂದರ್ಭದಲ್ಲಿ ಮುಡಾ ಅಧ್ಯಕ್ಷರಾಗಿದ್ದು ಬಿಜೆಪಿಯ ರಾಜೇಶ್ ಎಂಬ ವ್ಯಕ್ತಿ.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮಾಯಿ ಅವರು ಮಾಡಿದ್ದ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರನ್ನು ಹೊಣೆಗಾರರನ್ನಾಗಿ ಮಾಡಿ ಟೀಕಿ ಮಾಡುತ್ತಿದ್ದಾರೆ ಎಂದು ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.