ಬೆಂಗಳೂರು,ಮೇ24- ಕೇರಳ ಹಾಗೂ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕಾವೇರಿ ಜಲಾನಯನ ಭಾಗದ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವು ನಿರಂತರವಾಗಿ ಏರಿಕೆಯಾಗುತ್ತಿದೆ. ಇಂದು 6400 ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಜಲಾಶಯದಲ್ಲಿ ಗರಿಷ್ಠ ಮಟ್ಟ 19.52 ಟಿಎಂಸಿಯಾಗಿದ್ದು ಪ್ರಸ್ತುತ 7.23 ಟಿಎಂಸಿ ಅಡಿ ಮಾತ್ರ ನೀರಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ನದಿಯಲ್ಲಿ ಒಳಹರಿವು ಹೆಚ್ಚಾಗಿರುವುದು ಜನರಲ್ಲಿ ಸಂತಸ ಉಂಟು ಮಾಡಿದೆ.
ಕೆಆರ್‌ಎಸ್ ಜಲಾಶಯಕ್ಕೆ ಎರಡೂವರೆ ಸಾವಿರ ಕ್ಯೂಸೆಕ್‌ಗೂ ಹೆಚ್ಚು ಒಳಹರಿವು ಇದೆ. 49.45 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯ ಈ ಜಲಾಶಯದಲ್ಲಿ ಪ್ರಸ್ತುತ 11.60 ಟಿಎಂಸಿ ನೀರು ಮಾತ್ರ ಇದ್ದು, ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಹಾರಂಗಿ ಜಲಾಶಯಕ್ಕೆ 400 ಕ್ಯೂಸೆಕ್ ಹಾಗೂ ಹೇಮಾವತಿ ಜಲಾಶಯಕ್ಕೆ 600 ಕ್ಯೂಸೆಕ್‌ನಷ್ಟು ಒಳಹರಿವು ಇದೆ. ಇದೇ ರೀತಿ ಮಳೆ ಮುಂದುವರೆದರೆ ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.