Sunday, September 8, 2024
Homeರಾಜ್ಯಬೆಂಗಳೂರು-ತುಮಕೂರು-ಅರಸೀಕೆರೆ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಹೆಚ್ಚುವರಿ ಬೋಗಿ ಅಳವಡಿಸಲು ಒತ್ತಾಯ

ಬೆಂಗಳೂರು-ತುಮಕೂರು-ಅರಸೀಕೆರೆ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಹೆಚ್ಚುವರಿ ಬೋಗಿ ಅಳವಡಿಸಲು ಒತ್ತಾಯ

ತುಮಕೂರು, ಜು.5- ಬೆಂಗಳೂರಿನಿಂದ ತುಮಕೂರು, ಅರಸೀಕೆರೆ ಕಡೆಗೆ ಸಂಜೆ ವೇಳೆ ಚಲಿಸುವ ವಿಶೇಷ ಪ್ಯಾಸೆಂಜರ್‌ ಹಾಗೂ ಗೋಲ್ಗುಂಬಸ್‌ ರೈಲುಗಳಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರು ಹೈರಾಣಾಗುತ್ತಿದ್ದು, ಹೆಚ್ಚುವರಿ ಜನರಲ್‌ ಬೋಗಿಗಳು ಅಥವಾ ಹೆಚ್ಚುವರಿ ರೈಲನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರನ್ನು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪ್ರತಿನಿತ್ಯ ರಾಜಧಾನಿ ಬೆಂಗಳೂರಿಗೆ ಅರಸೀಕೆರೆ, ತಿಪಟೂರು, ಗುಬ್ಬಿ, ತುಮಕೂರು ಸೇರಿದಂತೆ ಈ ಭಾಗದ ವಿವಿಧೆಡೆಗಳಿಂದ ಸಾವಿರಾರು ಮಂದಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ, ಬ್ಯುಸಿನೆಸ್‌ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ರೈಲಿನಲ್ಲಿ ಪ್ರಯಾಣ ಸುತ್ತಾರೆ.
ಕೆಲ ಎಕ್ಸ್ ಪ್ರೆಸ್‌ ರೈಲುಗಳು ನಿರ್ದಿಷ್ಟ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವುದನ್ನು ಬಿಟ್ಟರೆ ಉಳಿದೆಡೆ ನಿಲ್ಲಿಸುವುದಿಲ್ಲ. ಹಾಗಾಗಿ ಪ್ಯಾಸೆಂಜರ್‌ ರೈಲಿಗೆ ಬಹಳ ಬೇಡಿಕೆ ಇದೆ.

ಈ ಪ್ಯಾಸೆಂಜರ್‌ ರೈಲಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಈ ರೈಲಿನ ಬೋಗಿಗಳಲ್ಲಿ ಜನ ನಿಲ್ಲಲು ಜಾಗ ಇಲ್ಲದಷ್ಟರ ಮಟ್ಟಿಗೆ ಪ್ರಯಾಣಿಕರು ತುಂಬಿರುತ್ತಾರೆ. ಒಮ್ಮೊಮ್ಮೆ ಬೋಗಿಗಳಲ್ಲಿ ಉಸಿರಾಡಲು ಸಹ ಜಾಗ ಇರುವುದಿಲ್ಲ. ಉಸಿರುಗಟ್ಟಿ ಪ್ರಯಾಣಿಸಬೇಕಾದ ವಾತಾವರಣ ಸೃಷ್ಟಿಯಾಗಿರುತ್ತದೆ.

ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ವೇಳೆ ವೃದ್ಧರು, ಮಕ್ಕಳು, ಮಹಿಳೆಯರು ರೈಲುಗಾಡಿಗಳಲ್ಲಿ ಪ್ರಯಾಣಿಸುವುದು ಬಹಳ ದುಸ್ತರವಾಗಿದೆ. ಹಾಗಾಗಿ ಈ ಬಗ್ಗೆ ರೈಲ್ವೆ ಅಧಿ ಕಾರಿಗಳು ಹಾಗೂ ಸಚಿವ ವಿ.ಸೋಮಣ್ಣ ಅವರು ಗಮನ ಹರಿಸಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

ಗೋಲ್ಗುಂಬಸ್‌ ರೈಲಿನಲ್ಲಿ ಎರಡು ಅಥವಾ ಮೂರು ಮಾತ್ರ ಜನರಲ್‌ ಬೋಗಿಗಳು ಇರುತ್ತವೆ. ಉಳಿದಂತೆ ರಿಸರ್ವ್‌ ಬೋಗಿಗಳು ಇವೆ. ಇದರಿಂದಾಗಿ ಪಾಸ್‌ ಹೊಂದಿರುವವರು ಹಾಗೂ ಟಿಕೆಟ್‌ ಪಡೆದು ಪ್ರಯಾಣಿಸುವವರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಗೋಲ್ಗುಂಬಸ್‌ ರೈಲಿನಲ್ಲಿ ಹೆಚ್ಚುವರಿ ಜನರಲ್‌ ಬೋಗಿಗಳನ್ನು ಅಳಪಡಿಸಿದರೆ ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ. ಈ ಬಗ್ಗೆಯೂ ಸಚಿವರು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

RELATED ARTICLES

Latest News