ಬೆಂಗಳೂರು, ಜೂ.27– ಮುಂಗಾರು ಮಳೆ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಕೇರಳದ ವೈನಾಡಿನಲ್ಲಿ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳ ಹರಿವು ಗಣನೀಯವಾಗಿ ಹೆಚ್ಚಳವಾಗಿದೆ.
ಜಲವಿದ್ಯುತ್ ಉತ್ಪಾದಿಸುವ ಮೂರು ಜಲಾಶಯಗಳಿಗೆ ಒಟ್ಟು 24 ಸಾವಿರ ಕ್ಯೂಸೆಕ್‌್ಸಗೂ ಹೆಚ್ಚು ನೀರು ಹರಿದುಬರುತ್ತಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಲಿಂಗನಮಕ್ಕಿ ಜಲಾಶಯಕ್ಕೆ 19 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದರೆ ಸೂಪಾ ಜಲಾಶಯಕ್ಕೆ 2,800ಕ್ಕೂ ಹೆಚ್ಚು ಕ್ಯೂಸೆಕ್‌್ಸ ಹಾಗೂ ವರಾಹಿ ಜಲಾಶಯಕ್ಕೆ 1,600ಕ್ಕೂ ಹೆಚ್ಚು ಕ್ಯೂಸೆಕ್‌್ಸ ನೀರು ಒಳಹರಿವಿದೆ.
ಕಾವೇರಿ ನದಿಪಾತ್ರದ ಹಾರಂಗಿ ಜಲಾಶಯಕ್ಕೆ 1,400 ಕ್ಯೂಸೆಕ್ಸ್ ಗೂ ಹೆಚ್ಚು, ಹೇವಾಮತಿ ಜಲಾಶಯ 4,000 ಕ್ಕೂ ಹೆಚ್ಚು, ಕೆಆರ್‌ಎಸ್ ಜಲಾಶಯಕ್ಕೆ 3,800 ಕ್ಕೂ ಹೆಚ್ಚು ಹಾಗೂ ಕಬಿನಿ ಜಲಾಶಯಕ್ಕೆ 17,000 ಕ್ಯೂಸೆಕ್ಸ್ ನಷ್ಟು ಒಳಹರಿವಿದೆ.
ಕೃಷ್ಣ ಕೊಳ್ಳದ ಭದ್ರಾ ಜಲಾಶಯಕ್ಕೆ 4,000, ಘಟಪ್ರಭಾ ಜಲಾಶಯಕ್ಕೆ 27,000, ಆಲಮಟ್ಟಿ ಜಲಾಶಯಕ್ಕೆ 4,000 ಕ್ಯೂಸೆಕ್ಸ್ ನಷ್ಟು ಒಳಹರಿವಿದೆ. ಒಟ್ಟಾರೆ 12,000ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಕೃಷ್ಣ ಕೊಳ್ಳದ ವ್ಯಾಪ್ತಿಯ ಜಲಾಶಯಗಳಿಗೆ ಒಳಹರಿವಿದೆ.
ಶೇ.1 ರಷ್ಟು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಶೇಖರಣೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇನ್ನು ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ಕಾವೇರಿ ಕೊಳ್ಳದಲ್ಲಿ ಶೇ.16, ಕೃಷ್ಣ ಕೊಳ್ಳದಲ್ಲಿ ಶೇ.21 ಹಾಗೂ ಜಲವಿದ್ಯುತ್ ಉತ್ಪಾದಿಸುವ ಜಲಾಶಯಗಳಲ್ಲಿ ಪ್ರಸ್ತುತ ಶೇ.15 ರಷ್ಟು ನೀರು ಸಂಗ್ರಹವಾಗಿದೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಲಾಶಯಗಳ ನೀರಿನ ಸಂಗ್ರಹದ ಪ್ರಮಾಣ ಹೆಚ್ಚಳವಾಗಿರುವುದು ಕಂಡುಬಂದಿದೆ.