Friday, October 18, 2024
Homeರಾಜ್ಯರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ

ಬೆಂಗಳೂರು,ಜು.22- ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು, ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಿ ಜೈಲಿಗಟ್ಟುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.

ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯ ತಿಪ್ಪಣ್ಣ ಕನಕನೂರು ಅವರು ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದೆ. ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಆಗ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ನಕಲಿ ವೈದ್ಯರು ಹೆಚ್ಚಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದು ಅತ್ಯಂತ ಗಾಬರಿ ಪಡುವ ವಿಷಯವೂ ಹೌದು. ಇದನ್ನು ನಿಯಂತ್ರಿಸುವುದು ಸರ್ಕಾರದ ಜವಾಬ್ದಾರಿ ಎಂದರು.

ನಕಲಿ ವೈದ್ಯರನ್ನು ಬಂಧಿಸಿದಾಗ ಇಲ್ಲವೇ ಅವರ ಮೇಲೆ ಕ್ರಮ ಜರುಗಿಸಿದಾಗ ನಮ್ಮ ಜನಪ್ರತಿನಿಧಿಗಳು ನಮ್ಮ ಮೇಲೆ ಒತ್ತಡ ಹಾಕುತ್ತಾರೆ. ಆರ್ಯುವೇದಿಕ್, ಅಲೋಪತಿ ಮತ್ತು ಪಾರಂಪರಿಕ ಕ್ಲಿನಿಕ್ ನಡೆಸುವವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ ನಮಗೆ ಒತ್ತಡ ಬರುತ್ತವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇಂತಹ ನಕಲಿ ವೈದ್ಯರ ವಿರುದ್ಧ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದರ ವಿರುದ್ಧ FIR ದಾಖಲಿಸಿ ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಹಾಕುತ್ತೇವೆ ಎಂದು ವಿವರಿಸಿದರು.
ಅಲೋಪತಿ ನಡೆಸುತ್ತಿರುವವರು ಆಸ್ಪತ್ರೆ ಮುಂಭಾಗ, ಬ್ಲೂ ಕಲರ್ ಮತ್ತು ಆರ್ಯುವೇದ ಆಸ್ಪತ್ರೆ ನಡೆಸುತ್ತಿರುವವರು ಗ್ರೀನ್ ಕಲರ್ ಬೋರ್ಡ್‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರಿಂದ ನಕಲಿ ವೈದ್ಯರನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ. ಇಂಥವರ ಬಗ್ಗೆ ವಿಶೇಷ ನಿಗಾ ವಹಿಸಲು ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.

ಆಗ ತಿಪ್ಪಣ್ಣ ಅವರು ಕಲಬುರಗಿ ಜಿಲ್ಲೆಯಲ್ಲೇ 23 ನಕಲಿ ವೈದ್ಯರಿದ್ದಾರೆ. ನೀವು ಏನೇ ಕ್ರಮ ಜರುಗಿಸಿದರೂ ಮತ್ತೆ ಅವರು ಕ್ಲಿನಿಕ್‍ಗಳನ್ನು ಆರಂಭಿಸುತ್ತಾರೆ ಇದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ ಎಂದು ಸಚಿವರ ಗಮನಸೆಳೆದರು. ನೀವು ಏನೇ ಹೇಳಬೇಕಾದರೂ ದಾಖಲೆಗಳನ್ನು ಇಟ್ಟುಕೊಂಡು ಹೇಳಿ. ನಕಲಿ ವೈದ್ಯರು ಕ್ಲಿನಿಕಲ್‍ಗಳನ್ನು ಪ್ರಾರಂಭಿಸಿದರೆ ಎ-ïಐಆರ್ ದಾಖಲಿಸಲು ತಕ್ಷಣವೇ ಸೂಚನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಇವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.

RELATED ARTICLES

Latest News