ಬೆಂಗಳೂರು, ಜ.1- ವರ್ಷಾಚರಣೆ ಸಂಭ್ರಮದಲ್ಲಿ ನಶೆ ನೆತ್ತಿಗೇರಿಸಿಕೊಂಡು ಅಸಭ್ಯವಾಗಿ ವರ್ತಿಸಿದ ಪುಂಡರಿಬ್ಬರಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿ ಹತ್ತಾರು ಅವಾಂತರಗಳು ನಡೆದಿವೆ.ನಗರದಲ್ಲಿ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿ ನೂತನ ವರ್ಷವನ್ನು ಸ್ವಾಗತಿಸಿ ಪರಸ್ಪರ ಹೊಸ ವರ್ಷದ
ಶುಭಾಶಯ ವಿನಿಮಯ ಮಾಡಿಕೊಂಡರು.
ಹೊಸ ವರ್ಷದ ಪ್ರಮುಖ ಆಕರ್ಷಣೀಯ ಕೇಂದ್ರಗಳಾದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ಮುಂತಾದ ರಸ್ತೆಗಳು ವರ್ಣರಂಜಿತವಾಗಿ ಸಿಂಗಾರಗೊಂಡು ಮಿಂಚುತ್ತಿದ್ದವು.ಕೋರಮಂಗಲದ ಎಚ್ಡಿಎಫ್ಸಿ ಜಂಕ್ಷನ್ನಲ್ಲಿ ಯುವತಿಯೊಬ್ಬರ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಆಕೆಯೇ ಕಪಾಳ ಮೋಕ್ಷ ಮಾಡಿದ್ದಲ್ಲದೆ, ಸಾರ್ವಜನಿಕರು ಥಳಿಸಿದ್ದಾರೆ.
ಚರ್ಚ್ಸ್ಟ್ರೀಟ್ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮುಂತಾದ ಕಡೆ ಪಾರ್ಟಿ ವೇಳೆ ಮತ್ತಿನಲ್ಲಿ ತೂರಾಡಿದ ಯುವತಿ-ಯುವಕರನ್ನು ಅವರ ಸ್ನೇಹಿತರೇ ಕರೆದೊಯ್ಯುತ್ತಿದ್ದ ದೃಶ್ಯ ಕಂಡು ಬಂತು.
ಕೆಲವೊಂದು ಸ್ಥಳಗಳಲ್ಲಿ ಯುವಕರು ಹಾಗೂ ಯುವತಿಯರು ಮೈಮೇಲೆ ಪ್ರಜ್ಞೆ ಇಲ್ಲದಂತೆ ಪಾರ್ಟಿ ಸ್ಥಳದಲ್ಲೇ ಕುಸಿದು ಬಿದಿದ್ದಾಗ ಅವರ ಸ್ನೇಹಿತರೇ ಎತ್ತಿಕೊಂಡು ಹೋಗುತ್ತಿದ್ದುದ್ದು ಮತ್ತೆ ಕೆಲವರನ್ನು ಪೊಲೀಸರೇ ಕರೆದೊಯ್ದು ಅವರ ವಾಹನಗಳಿಗೆ ಹತ್ತಿಸುತ್ತಿದ್ದುದ್ದು ಕಂಡು ಬಂತು. ಅತಿಯಾದ ಮದ್ಯಸೇವಿಸಿ ತೇಲಾಡುತ್ತಿದ್ದ ಯುವತಿಯರನ್ನು ಮಹಿಳಾ ಪೊಲೀಸರು ಸೇಫ್ಟಿ ವುಮೆನ್ ಐಸ್ಲ್ಯಾಂಡ್ಗೆ ಕರೆದೊಯ್ದು ರಕ್ಷಿಸಿದ್ದಾರೆ.
ಪಾರ್ಟಿ ವೇಳೆ ಗುಂಪಿನಲ್ಲಿ ಕೆಲವು ಯುವಕ, ಯುವತಿಯರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದು ಕಂಡು ಬಂದಿತು.ಹೊಸ ವರ್ಷಾಚರಣೆ ಅಂಗವಾಗಿ ಎಂಜಿ ರಸ್ತೆಯ ಮೆಟ್ರೋ ಬಂದ್ ಮಾಡಿದ್ದರಿಂದ ಕಬ್ಬನ್ಪಾರ್ಕ್ ಮೆಟ್ರೋಗೆ ಹೋಗಲು ಜನಜಂಗುಳಿಯಿಂದಾಗಿ ನೂಕು ನುಗ್ಗಲು ಉಂಟಾಯಿತು. ಪೊಲೀಸರು ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹರ ನಡೆಸಿದರು.
ಯುವತಿಯೊಂದಿಗೆ ಅಸಭ್ಯ ವರ್ತನೆ
ಹೊಸ ವರ್ಷ ಸಂಭ್ರಮಾಚರಣೆಗಾಗಿ ಬಾಯ್ಫ್ರೆಂಡ್ ಜೊತೆ ಪಬ್ಗೆ ಬಂದಿದ್ದ ಅಸ್ಸಾಂ ಮೂಲದ ಯುವತಿಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಡುಬೀಸನಹಳ್ಳಿಯಲ್ಲಿರುವ ಪಬ್ವೊಂದಕ್ಕೆ ರಾತ್ರಿ ಅಸ್ಸಾಂ ಮೂಲದ ಯುವತಿ ತನ್ನ ಬಾಯ್ ಫ್ರೆಂಡ್ ಜೊತೆ ಹೋಗಿದ್ದಾಗ, ಪಬ್ನಲ್ಲಿದ್ದ ಯುವಕನೊಬ್ಬ ಈಕೆಗೆ ಮದ್ಯ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ.
ಯುವತಿ ನಿರಾಕರಿಸಿದಾಗ ಆ ಯುವಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಆಕೆ ಕೂಗಾಡಿ ರಂಪಾಟವಾಡಿದ್ದಾಳೆ. ಆ ವೇಳೆ ಆ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಆ ಯುವತಿ ಮಾರತ್ತಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಬ್ಗೆ ತೆರಳಿ ಅಲ್ಲಿನ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿ ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ.
ಕುಡಿದ ಅಮಲಿನಲ್ಲಿ ಆಟೋ ಚಾಲಕನ ಮೇಲೆ ಹಲ್ಲೆ :
ಬೆಂಗಳೂರು,ಜ.1- ಹೊಸ ವರ್ಷಾಚರಣೆ ಸಂಭ್ರಮದ ಪಾರ್ಟಿ ವೇಳೆ ಕುಡಿದ ಅಮಲಿನಲ್ಲಿ ಜಗಳವಾಗಿ ಆಟೋ ಚಾಲಕನ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ
ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಆಟೋ ಚಾಲಕ ಕುಶಾಲ್ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೊಸ ವರ್ಷಾಚರಣೆಗಾಗಿ ತಡರಾತ್ರಿ ಕಡಪಸ್ವಾಮಿ ಮಠದ ಸಮೀಪ ಕುಶಾಲ್ ಸೇರಿದಂತೆ ಹಲವರು ಸೇರಿ ಪಾರ್ಟಿ ಮಾಡಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದಿದೆ. ಆ ವೇಳೆ ಆರೋಪಿಗಳು ಸಿಮೆಂಟ್ ಇಟ್ಟಿಗೆಯಿಂದ ಕುಶಾಲ್ ಅವರ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ತಕ್ಷಣ ಕುಶಾಲ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಬೀರು ಬಾಟಲಿಗಳು ಪತ್ತೆಯಾಗಿದ್ದು, ಪಾರ್ಟಿ ಮಾಡಿರುವುದು ಕಂಡುಬಂದಿದೆ.
ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.