Friday, November 22, 2024
Homeರಾಜಕೀಯ | Politicsಇಂಡಿ ಮೈತ್ರಿ ಮೂರಾಬಟ್ಟಿ, ಎನ್‍ಡಿಎ ಹ್ಯಾಟ್ರಿಕ್ ಗೆಲುವು ಫಿಕ್ಸ್ : ಅಶೋಕ್ ಭವಿಷ್ಯ

ಇಂಡಿ ಮೈತ್ರಿ ಮೂರಾಬಟ್ಟಿ, ಎನ್‍ಡಿಎ ಹ್ಯಾಟ್ರಿಕ್ ಗೆಲುವು ಫಿಕ್ಸ್ : ಅಶೋಕ್ ಭವಿಷ್ಯ

ಬೆಂಗಳೂರು,ಮಾ.27- ಬಿಜೆಪಿ ನೇತೃತ್ವದ ಎನ್‍ಡಿಎ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದು ನರೇಂದ್ರಮೋದಿ ಅವರು ಪ್ರಧಾನಿಯಾಗುವುದು ಖಚಿತ. ಕಾಂಗ್ರೆಸ್ ಮೂರನೇ ಬಾರಿಗೆ ಸೋಲುವುದು ನಿಶ್ಚಿತ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನೇತೃತ್ವದ ಇಂಡಿ ಮೂರಾಬಟ್ಟೆಯಾಗಿದೆ. ಎನ್‍ಡಿಎ ಬಲಿಷ್ಠವಾಗಿದ್ದು, ಮೋದಿ ಅವರನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 10 ತಿಂಗಳಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಜಾನುವಾರುಗಳಿಗೆ ಮೇವು, ಕುಡಿಯಲು ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟ ಚುನಾವಣೆಯಲ್ಲಿ ನಿರತರಾಗಿದ್ದಾರೆ. ಜನರ ಸಂಕಷ್ಟಗಳನ್ನು ಕೇಳುವವರು ಯಾರು ಎಂದು ಪ್ರಶ್ನೆ ಮಾಡಿದರು.

ಸಂಸ್ಕøತಿ ಇಲ್ಲದವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ನೀರಾವರಿ ಸಚಿವರು ಕುಡಿಯಲು ನೀರು ಕೊಡದ ಪರಿಸ್ಥಿತಿಯಲ್ಲಿ ತಂದೊಡ್ಡಿದ್ದಾರೆ. ಬ್ರಾಂಡ್ ಬೆಂಗಳೂರು ಆಯ್ತು, ಬಾಂಬ್ ಬೆಂಗಳೂರು ಆಯ್ತು ಈಗ ಬಾಯ್ ಬಾಯ್ ಬೆಂಗಳೂರು ಆಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅವರಿಗೆ ಮೋದಿ ಅವರ ಬಗ್ಗೆ, ಮೋದಿ ಅವರ ಜಾತಿ ಬಗ್ಗೆ ಆಡಿದ ಮಾತಿಗೆ ಜೈಲಿನ ಕಂಬಿ ಎಣಿಸುವ ಶಿಕ್ಷೆ ಆಗಿದೆ. ಇಷ್ಟಾದರೂ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಈಗಾಗಲೇ ಬಹಳಷ್ಟು ಹೇಳಿಕೆಗಳು ಹೊರಬಂದಿದೆ.

ಚಾಯ್ವಾಲಾ ಎಂದರು. ಚಾಯ್ ಪೇ ಚರ್ಚೆ ಆಯೋಜನೆ ಮಾಡಿದರು. ಅಂದೇ ಬುದ್ಧಿ ಕಲಿಯಬಹುದಿತ್ತು. ಆದಾದ ಮೇಲೆ ಚೌಕಿದಾರ್ ಚೋರ್ ಅಂದರು. ಅದನ್ನೇ ನಾವು ಅಸ್ತ್ರ ಮಾಡಿಕೊಂಡ್ವಿ. ನಾವೆಲ್ಲಾ ಚೌಕಿದಾರ್ ಅಂದೇವು. ಲಾಲ್ಲೂ ಪ್ರಸಾದ್ ಯಾದವ್ ಪರಿವಾರ್ ಅಂದರು. ನಾವೆಲ್ಲಾ ಮೋದಿ ಪರಿವಾರ್ ಎಂದೆವು ಎಂದರು.

ಈಗ ಶಿವರಾಜ್ ತಂಗಡಗಿ ಮೋದಿ ಬಗ್ಗೆ ಮಾತನಾಡುವವರಿಗೆ ಕಪಾಳಕ್ಕೆ ಹೊಡೆಯಿರಿ ಅಂದಿದ್ದಾರೆ. ಸೋಲಿನ ಭೀತಿಯಲ್ಲಿದ್ದಾಗ ಇಂತಹ ಮಾತು ಬರುತ್ತಿದೆ. ಕ್ಯಾಂಡಿಡೇಟ್ ಇಲ್ಲದೇ ಅವರ ಮಕ್ಕಳು, ಸೊಸೆಯರನ್ನು ಕರೆತಂದು ನಿಲ್ಲಿಸಿದ್ದಾರೆ. ತಂಗಡಗಿ ಈ ಹಿಂದೆ ಬಿಜೆಪಿಯಲ್ಲಿದ್ದವರು, ಮಂತ್ರಿಯಾಗಿದ್ದರು. ಸಕ್ಕರೆ ಸಚಿವರಾಗಿದ್ದರು, ಬಿಜೆಪಿಯಲ್ಲಿದ್ದಾಗ ಸೋನಿಯಾ ಗಾಂಧಿಗೆ ಹೊಡೆಯಿರಿ ಎಂದಿದ್ದರು. ಈಗ ಕಾಂಗ್ರೆಸ್‍ನಲ್ಲಿದ್ದು, ಮೋದಿ ಮೋದಿ ಎಂದವರಿಗೆ ಹೊಡೆಯಿರಿ ಅನ್ನುತ್ತಿದ್ದಾರೆ. ಜನ ಮುಂದೆ ತಂಗಡಗಿಗೆ ಹೊಡೆಯುತ್ತಾರೆ ಎಂದು ಹೇಳಿದರು.

ಬೆಂಗಳೂರಿನ ಯಾವುದೋ ಫ್ಲಾಟ್‍ನಲ್ಲಿ ಕಲುಷಿತ ನೀರನ್ನು ಕೊಟ್ಟಿದ್ದಾರೆ. ಸರ್ಕಾರ ಏನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ನಿಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 9 ತಿಂಗಳಾಯ್ತು. ಎಷ್ಟು ನಿರುದ್ಯೋಗ ಸಮಸ್ಯೆ ಬಗೆಹರಿಸಿದ್ದೀರಿ? 50 ವರ್ಷ ನಿಮ್ಮ ಅಧಿಕಾರ ಕೇಂದ್ರದಲ್ಲಿ ಇತ್ತಲ್ಲಾ, ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಿ? ಎಷ್ಟು ನಿರುದ್ಯೋಗಿಗಳಿಗೆ ಪರಿಹಾರ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರಮೋದಿ ಹ್ಯಾಟ್ರಿಕ್ ಸಾಧಿಸುವುದು ಖಚಿತ, ಕಾಂಗ್ರೆಸ್ ಮೂರನೇ ಬಾರಿ ಸೋಲುವುದು ನಿಶ್ಚಿತ ಎಂದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಹಳ ಸೂಕ್ಷ್ಮ ಕ್ಷೇತ್ರ. ಹೀಗಾಗಿ, ನಾವು ಅಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜನೆಗೆ ಮನವಿ ಮಾಡಿದ್ದೇವೆ ಎಂದರು.

ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅಶೋಕ್, ನಾನು ಕೂಡ ಬೀದರ್ಗೆ ಹೋಗಿದ್ದೇನೆ. ಅಲ್ಲಿನ ಬಂಡಾಯ ಶಮನಗೊಳಿಸಿದ್ದೇನೆ. ತುಮಕೂರಿಗೆ ನಾನು ಹೋಗಿದ್ದೇನೆ. ಯಡಿಯೂರಪ್ಪ ಅವರು ಮಾಧುಸ್ವಾಮಿ ಸಮಾಧಾನಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಕೂಡ ಸರಿ ಹೋಗುತ್ತದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಳಿತು ಮಾತನ್ನಾಡುತ್ತಾರೆ. ಅದು ಬಗೆಹರಿಯಲಿದೆ. ಜ್ವರ ಬಂದಾಗ ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಎರಡ್ಮೂರು ದಿನ ಬೇಕು. ಅದೆಲ್ಲಾ ಇನ್ನು ಎರಡ್ಮೂರು ದಿನಗಳಲ್ಲಿ ಸರಿ ಹೋಗುತ್ತದೆ ಎಂದು ಹೇಳಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಅಶ್ವತ್ಥನಾರಾಯಣ್ ಗೌಡ, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.

RELATED ARTICLES

Latest News