ನವದೆಹಲಿ,ಜೂ.24- ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ವಿರುದ್ಧ ಒಗ್ಗಟ್ಟಾಗಿದ್ದ ಇಂಡಿ ಒಕ್ಕೂಟದ ಸದಸ್ಯರು ಲೋಕಸಭೆ ಅಧಿವೇಶನದಲ್ಲೂ ಮೈತ್ರಿ ಮುಂದುವರೆಸಲು ತೀರ್ಮಾನಿಸಿದ್ದಾರೆ.
ಇಂದಿನಿಂದ ಶುರುವಾಗಲಿರುವ ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಆಡಳಿತ ಪಕ್ಷದ ವಿರುದ್ಧ ಸಮರ ಸಾರಲು ಸನ್ನದ್ಧರಾಗಿದ್ದಾರೆ.
ಏಕತೆಯ ಸಂಕೇತವಾಗಿ ಎಲ್ಲಾ ಇಂಡಿ ಒಕ್ಕೂಟದ ಸಂಸದರು ಒಟ್ಟಾಗಿ ಲೋಕಸಭೆಯನ್ನು ಪ್ರವೇಶಿಸುವ ಮೂಲಕ ಒಗ್ಗಟ್ಟು ಮುಂದುವರೆಯಲಿದೆ ಎಂಬ ಸೂಚನೆ ರವಾನಿಸಿದ್ದಾರೆ.ಜುಲೈ 3ರವರೆಗೆ ನಡೆಯಲಿರುವ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಲೋಕಸಭಾ ಸ್ಪೀಕರ್ ಆಯ್ಕೆ ಬುಧವಾರ ನಡೆಯಲಿದ್ದು, ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಧಿವೇಶನದ ಮೊದಲ ದಿನ, ಏಳು ಬಾರಿ ಸಂಸದರಾಗಿದ್ದ ಭರ್ತಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ದಾಖಲಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಹಿರಿತನದ ಆಧಾರದಲ್ಲಿ ಸಂಸದ ಕೆ.ಸುರೇಶ್ ಈ ಸ್ಥಾನಕ್ಕೆ ನಿಯೋಜಿಸಬೇಕಿತ್ತು ಎನ್ನುವುದು ಕಾಂಗ್ರೆಸ್ ವಾದವಾಗಿದೆ.