Monday, July 8, 2024
Homeರಾಜ್ಯನಾಳೆ ಲೋಕಸಭೆ ಚುನಾವಣೆ ಫಲಿತಾಂಶ : ಭಾರೀ ಬಿಗಿ ಭದ್ರತೆಯಲ್ಲಿ ಮತಎಣಿಕೆಗೆ ಸಿದ್ಧತೆ

ನಾಳೆ ಲೋಕಸಭೆ ಚುನಾವಣೆ ಫಲಿತಾಂಶ : ಭಾರೀ ಬಿಗಿ ಭದ್ರತೆಯಲ್ಲಿ ಮತಎಣಿಕೆಗೆ ಸಿದ್ಧತೆ

ಬೆಂಗಳೂರು,ಜೂ.3- ವಿಶ್ವದ ಗಮನಸೆಳೆದಿರುವ 18ನೇ ಲೋಕಸಭೆ ಚುನಾವಣೆಯ 542 ಕ್ಷೇತ್ರಗಳ ಮತ ಎಣಿಕೆ ನಾಳೆ ಭಾರೀ ಬಿಗಿ ಭದ್ರತೆಯಲ್ಲಿ ನಡೆಯಲಿದ್ದು, ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಯಾರಿಗೆ ಎಂಬುದು ತೀರ್ಮಾನವಾಗಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ನಡೆದು, ಮತದಾರ ಗ್ಯಾರಂಟಿಗೋ ಇಲ್ಲವೋ ಮೋದಿ ಗ್ಯಾರಂಟಿಗೋ ಅಚ್ಚು ಒತ್ತಿದ್ದಾನೋ ಎಂಬುದು ಬಹಿರಂಗವಾಗಲಿದೆ.

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದ ಬಳಿಕ ಇವಿಎಂಗಳ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆ ನಂತರ ಫಲಿತಾಂಶದ ಚಿತ್ರಣ ಹೊರಬೀಳಲಿದ್ದು, ಬಹುತೇಕ ಸಂಜೆಯೊಳಗೆ ಜನಾದೇಶ ಯಾರಿಗೆ ಎಂಬುದು ಸ್ಪಷ್ಟವಾಗಲಿದೆ.

ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಬಾರಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಿಜೆಪಿ 3ನೇ ಬಾರಿಗೆ ಹ್ಯಾಟ್ರಿಕ್‌ ಜಯ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.

ಆದರೆ ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತಗಟ್ಟೆ ಸಮೀಕ್ಷೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಕಳೆದ 2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಕಾಂಗ್ರೆಸ್‌‍ ಲೋಕಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

1999ರಿಂದ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಈವರೆಗೂ ಎರಡಂಕಿಯನ್ನು ದಾಟಿಲ್ಲ. ಈ ಬಾರಿ 20 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆಯುತ್ತೇವೆ ಎಂಬ ನಿರೀಕ್ಷೆಯನ್ನು ಕೈ ನಾಯಕರು ಹೊಂದಿದ್ದಾರೆ.

ಗ್ಯಾರಂಟಿಗಳ ಅನುಷ್ಟಾನದಿಂದ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಬಸ್‌‍ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ, ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆ, ಪದವಿ ಮತ್ತು ಡಿಪ್ಲೊಮೊ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ, ಅನ್ನಭಾಗ್ಯ, ಉಚಿತವಾಗಿ ವಿದ್ಯುತ್‌ ಪೂರೈಸುವ ಗೃಹಜ್ಯೋತಿ ಯೋಜನೆಗಳಿಂದ ಫಲಾನುಭವಿಗಳು ಸಂತುಷ್ಟರಾಗಿದ್ದಾರೆ. ಹೀಗಾಗಿ ನಮಗೆ ಹೆಚ್ಚಿನ ಸ್ಥಾನ ಬಂದೇ ಬರಲಿದೆ ಎಂಬ ಆತವಿಶ್ವಾಸದಲ್ಲಿದ್ದಾರೆ.

ಆದರೆ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌‍ ರಾಜ್ಯದಲ್ಲಿ ಈ ಬಾರಿಯೂ ಎರಡಂಕಿಯನ್ನು ದಾಟುವುದಿಲ್ಲ ಎಂದು ಹೇಳಿದೆ. ಬಹುತೇಕ ಸಮೀಕ್ಷೆಗಳು 2-3, 3-5, 5-7, 5-8 ಸ್ಥಾನಗಳನ್ನು ನೀಡಿವೆ.

ಮೋದಿ ಗ್ಯಾರಂಟಿಯಲ್ಲಿ ಬಿಜೆಪಿ:
ಇನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಜೆಡಿಎಸ್‌‍ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದಿದ್ದ ಬಿಜೆಪಿ ಈ ಬಾರಿ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್‌‍ ಗ್ಯಾರಂಟಿಗಿಂತ ರಾಜ್ಯದ ಜನತೆ ಮೋದಿ ಗ್ಯಾರಂಟಿ ಬಗ್ಗೆಯೇ ಹೆಚ್ಚು ಒಲವು ಹೊಂದಿದ್ದಾರೆ.

ಏನೇ ಆದರೂ ನಾವು 25ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ದೃಢ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮತಗಟ್ಟೆ ಸಮೀಕ್ಷೆಗಳು ಕೂಡ ರಾಜ್ಯದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟ ಕಡಿಮೆ ಎಂದರೂ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ.

ಇನ್ನು ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಎನ್‌ಡಿಎ 24-26 ಕ್ಷೇತ್ರಗಳನ್ನು ಗೆದ್ದು ದಾಖಲೆ ಬರೆಯಬಹುದೆಂಬ ಭವಿಷ್ಯ ನುಡಿದಿರುವುದು ಕಾಂಗ್ರೆಸ್‌‍ ನಾಯಕರನ್ನು ತಲೆ ತಿರುಗುವಂತೆ ಮಾಡಿದೆ.

ಹೀಗಾಗಿಯೇ ಮತಗಟ್ಟೆ ಸಮೀಕ್ಷೆಗಳು ಸುಳ್ಳು ಎಂದು ಕಾಂಗ್ರೆಸ್‌‍ ಪ್ರತಿಪಾದಿಸಿದರೆ, ಬಿಜೆಪಿ ಇದು ವಾಸ್ತವಕ್ಕೆ ಹತ್ತಿರವಿದ್ದು ಜನರ ನಾಡಿಮಿಡಿತದ ಮೇಲೆಯೇ ಮತಗಟ್ಟೆ ಸಮೀಕ್ಷೆಗಳು ಹೊರಬಂದಿವೆ. ನಾವು 25ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಪ್ರಧಾನಿ ಮೋದಿಗೆ ಉಡುಗೊರೆ ಕೊಡುತ್ತೇವೆ ಎಂಬ ವಿಶ್ವಾಸದಲ್ಲಿದೆ.

ನಿಷೇಧಾಜ್ಞೆ: ಮತ ಎಣಿಕೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಜೂನ್‌ 3 ಸೋಮವಾರ ಸಂಜೆ 6 ಗಂಟೆಯಿಂದ ಜೂನ್‌ 5ರ ಮಧ್ಯರಾತ್ರಿ 12 ಗಂಟೆಯವರೆಗೆ ದೇಶಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ನಿಷೇಧಾಜ್ಞೆ ವೇಳೆ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ, ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮುಂತಾದವುಗಳಲ್ಲಿ ಗುಂಪು ಸೇರುವಂತಿಲ್ಲ. ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಚಿ, ಚೂರಿ, ದೊಣ್ಣೆ, ಪಿಸ್ತೂಲು, ಬಂದೂಕು ಸೇರಿದಂತೆ ಯಾವುದೇ ಮಾರಕಾಸ್ತ್ರಗಳನ್ನು ಒಯ್ಯುವುದು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಲಾಗುತ್ತದೆ.

ಫಲಿತಾಂಶ ಪ್ರಕಟವಾದ ದಿನ ಗೆಲುವು ಸಾಧಿಸುವ ಅಭ್ಯರ್ಥಿಗಳ ಮೆರವಣಿಗೆ ಹಾಗೂ ಪಟಾಕಿ, ಬಾಣ, ಬಿರುಸು ಹಚ್ಚುವುದು ಹಾಗೂ ಸಾರ್ವಜನಿಕ ಸಭೆ ಸಮಾರಂಭ ನಡೆಸುವುದು, ಗೆಲುವಿನ ಸಂಭ್ರಮಾಚರಣೆ ನಡೆಸುವುದನ್ನು ನಿಷೇಧಿಸಿದೆ. ಸಾರ್ವಜನಿಕವಾಗಿ ಯಾವುದೇ ಘೋಷಣೆ ಹಾಕುವುದು, ಚೇಷ್ಟೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಅಥವಾ ಪ್ರಸಾರ ಮಾಡುವುದನ್ನೂ ನಿಷೇಧಿಸಲಾಗಿರುತ್ತದೆ.

RELATED ARTICLES

Latest News