ನವದೆಹಲಿ, ಆ.28- ಮುಂಬರುವ 2030ರಲ್ಲಿ ದೇಶದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಹರಾಜು ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹರಾಜು ಪ್ರಕ್ರಿಯೆ ಅಂಗೀಕಾರವಾದರೆ ಗುಜರಾತ್ ಸರ್ಕಾರಕ್ಕೆ ಅಗತ್ಯವಾದ ಅನುದಾನವನ್ನು ಮಂಜೂರು ಮಾಡಲು ಸಹ ಅನುಮೋದನೆ ನೀಡಿದೆ. ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಅಹಮದಾಬಾದ್‌ನಗರ ಯೋಗ್ಯವೆಂದು ಗುರುತಿಸಲಾಗಿದೆ.
ವಿಶ್ವ ದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಉತ್ಸಾಹಭರಿತ ಕ್ರೀಡಾ ಸಂಸ್ಕೃತಿಯಿಂದಾಗಿ ಅಹಮದಾಬಾದ್ ಅನ್ನು ಆತಿಥೇಯ ನಗರವಾಗಿ ಪ್ರಸ್ತಾಪಿಸಿದೆ.
ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಬಗ್ಗೆ ಇದೇ ಮಾರ್ಚ್‌ನಲ್ಲಿ ಆಸಕ್ತಿ ವ್ಯಕ್ತಪಡಿಸಿತ್ತು. ಈ ಪ್ರಸ್ತಾವನೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅನುಮೋದನೆ ನೀಡಿತ್ತು.
ಇದೀಗ ಕೇಂದ್ರ ಸಚಿವ ಸಂಪುಟವು ಸಹ ಸಮ್ಮತಿಯನ್ನು ಸೂಚಿಸಿದೆ. ಬಿಡ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಅನುಮೋದಿಸಿದೆ.