ನವದೆಹಲಿ,ಸೆ.25– ಕಳೆದ ಭಾನುವಾರ ನಡೆದಿದ್ದ ಏಷ್ಯಾ ಕಪ್ ಸೂಪರ್ ಪಂದ್ಯದ ವೇಳೆ ಉದ್ಧಟತನ ಮೆರೆದಿದ್ದ ಪಾಕಿಸ್ತಾನ ಕ್ರಿಕೆಟಿಗರಾದ ಸಾಹಿಬ್ಝಾದ ಫರ್ಹಾನ್ ಮತ್ತು ಹ್ಯಾರಿಸ್ ರೌಫ್‌ಅವರ ಪ್ರಚೋದನಕಾರಿ ವರ್ತನೆಗಾಗಿ ಭಾರತವು ಐಸಿಸಿಗೆ ಅಧಿಕೃತ ದೂರು ನೀಡಿದೆ. ಬಿಸಿಸಿಐ ಮತ್ತು ಐಸಿಸಿಗೆ ಭಾರತವು ಎರಡು ಸಂಸ್ಥೆಗೂ ದೂರು ಸಲ್ಲಿಸಿದೆ. ಐಸಿಸ್‌ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದೆ.
ಸಾಹಿಬ್ಝಾದ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ವಿಚಾರಣೆಗಾಗಿ ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಮುಂದೆ ಹಾಜರಾಗಬೇಕಾಗಬಹುದು.
ಪಹಲ್ಗಾಂ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ, ಪಾಕ್‌ಗೆ ತಕ್ಕ ಉತ್ತರ ನೀಡಿತ್ತು. ಆದರೆ ಕಾರ್ಯಾಚರಣೆ ವೇಳೆ ಭಾರತದ 60 ಫೈಟರ್ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್ ಸೇನೆ ಸುಳ್ಳು ಹೇಳಿತ್ತು. ಇದೇ ಸುಳ್ಳನ್ನು ಈಗ ಪಾಕಿಸ್ತಾನ ಕ್ರಿಕೆಟಿಗರೂ ಪ್ರಚಾರ ಮಾಡುತ್ತ ಭಾರತ ಮೇಲೆ ಹಗೆ ತೀರಿಸಲು ಮುಂದಾಗಿದ್ದಾರೆ. ಅಲ್ಲದೆ, ಸ್ವತಃ ಪಾಕ್ ಸೇನೆಯೇ ಅಲ್ಲಿನ ಕ್ರಿಕೆಟ್ ತಂಡಗಳಿಗೆ ಈ ರೀತಿ ಸಂಭ್ರಮಿಸಲು ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಸೂರ್ಯಕುಮಾರ್ ವಿರುದ್ಧ ದೂರು ನೀಡಿದ ಪಿಸಿಬಿ :
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ತಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಭಾರತೀಯ ಸಶಸ್ತ್ರ ಪಡೆಗಳಿಗೆ ತಮ ತಂಡದ ಗೆಲುವನ್ನು ಅರ್ಪಿಸಿದ್ದಕ್ಕಾಗಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಪ್ರತೀಕಾರದ ಸಂಕೇತವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಅಧಿಕೃತ ದೂರು ನೀಡಿದೆ ಎಂದು ವರದಿಯಾಗಿದೆ.
ಸೂರ್ಯಕುಮಾರ್ ಯಾದವ್ ಅವರ ಹೇಳಿಕೆಗಳು ರಾಜಕೀಯ ಎಂದು ಪಿಸಿಬಿ ಆರೋಪಿಸಿದೆ. ಆದರೆ ತಾಂತ್ರಿಕವಾಗಿ ಹೇಳಿಕೆ ನೀಡಿದ ಏಳು ದಿನಗಳಲ್ಲಿ ದೂರು ದಾಖಲಿಸಬೇಕಾಗಿದೆ. ಪಾಕ್ ಕ್ರಿಕೆಟ್ ಮಂಡಳಿ ಯಾವಾಗ ದೂರು ದಾಖಲಿಸಿದೆ ಎನ್ನುವುದು ತಿಳಿದುಬಂದಿಲ್ಲ.