ಸಿಡ್ನಿ, ಜ.5- ಕಾಂಗರೂ ನಾಡಿನಲ್ಲಿ ಕಳೆದ ದಶಕದಿಂದಲೂ ಸರಣಿ ಜಯಿಸುತ್ತ ಬಂದಿದ್ದ ಟೀಮ್ ಇಂಡಿಯಾದ ಅಜೇಯ ಓಟಕ್ಕೆ ಸಿಡ್ನಿಯಲ್ಲಿ 6 ವಿಕೆಟ್ ಗಳ ಅಂತರದಿಂದ ಸೋಲುವ ಮೂಲಕ ತೆರೆ ಬಿದ್ದಿದೆ.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2016 ರಿಂದಲೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ಇಂಡಿಯಾ ಕಾಂಗರೂ ನಾಡಿನಲ್ಲಿ 2018-19 ಹಾಗೂ 2020-21ರಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿದ್ದು ಈ ಬಾರಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಕಾಣುವ ಭರವಸೆ ಮೂಡಿಸಿತ್ತು.
ಅದಕ್ಕೆ ತಕ್ಕಂತೆ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ ಗಳ ಭರ್ಜರಿ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ ತಂಡಕ್ಕೆ ಎರಡನೇ ಪಂದ್ಯದಿಂದ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಸ್ಥಾನಕ್ಕೆ ಮರಳಿದ ನಂತರ ಸೋಲಿನ ಸುಳಿಗೆ ಸುಲಿಕಿತು.
ಅಡಿಲೇಡ್ ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 10 ವಿಕೆಟ್ ಸೋಲು ಕಂಡ ಭಾರತ, ಬ್ರಿಸ್ಬೇನ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ತಂಡವು ಕ್ರಮವಾಗಿ 184 ಹಾಗೂ 6 ವಿಕೆಟ್ಗಳ ಸೋಲು ಕಂಡು ಸರಣಿಯನ್ನು 3-1 ರಿಂದ ಕಳೆದುಕೊಂಡಿದೆ.
ಕಾಡಿದ ಬೂಮ್ರಾ ಅನುಪಸ್ಥಿತಿ:
ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ 4ನೇ ಇನಿಂಗ್‌್ಸ ನಲ್ಲಿ 162 ರನ್ ಗಳ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಇದಕ್ಕೆ ತಕ್ಕಂತೆ ನಾಯಕ ಜಸ್ ಪ್ರೀತ್ ಬೂಮ್ರಾ ಬೆನ್ನು ನೋವಿನಿಂದ ಬೌಲಿಂಗ್ ಮಾಡದೆ ಇರುವುದು ಪ್ಯಾಟ್ ಕಮಿನ್‌್ಸ ತಂಡಕ್ಕೆ ವರವಾಯಿತು.
ಕನ್ನಡಿಗ ಪ್ರಸಿದ್‌್ಧ ಕೃಷ್ಣ ಮೂರು ವಿಕೆಟ್ ಪಡೆದು ಆಸೀಸ್ ಅನ್ನು ಸೋಲಿನ ಸುಳಿಗೆ ಸುಲಿಕಿದ್ದರಾದರೂ, ಇವರಿಗೆ ವೇಗಿ ಮೊಹಮದ್ ಸಿರಾಜ್ ಹಾಗೂ ಸ್ಪಿನ್ನರ್ ಗಳಿಂದ ಉತ್ತಮ ಬೆಂಬಲ ಸಿಗದ ಕಾರಣ 6 ವಿಕೆಟ್ ಗಳ ಗೆಲುವು ಸಾಧಿಸಿ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿತು.
ಆಸ್ಟ್ರೇಲಿಯಾದ ದ್ವಿತೀಯ ಇನಿಂಗ್‌್ಸ ನಲ್ಲಿ ಉಸಾನ್ ಖ್ವಾಜಾ (41 ರನ್), ಟ್ರಾವಿಸ್ ಹೆಡ್ (34 ರನ್), ಯುವ ಆಟಗಾರ ಬಿಹುವೆಬ್ ಸ್ಟರ್ (39ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 27 ಓವರ್ ಗಳಲ್ಲೇ 162/4 ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಸ್ಕಾಟ್ ಬೌಲ್ಯಾಂಡ್ (10 ವಿಕೆಟ್) ಪಂದ್ಯ ಶ್ರೇಷ್ಠ ಹಾಗೂ ಜಸ್ ಪ್ರೀತ್ ಬೂಮ್ರಾ (32 ವಿಕೆಟ್, 42 ರನ್) ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಡಬ್ಲ್ಯುಟಿಸಿ ಫೈನಲ್ನಿಂದ ಟೀಮ್ಇಂಡಿಯಾ ಔಟ್
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಯೋಜನೆಯ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಹಂತ ತಲುಪಬೇಕಾದರೆ ಸಿಡ್ನಿ ಟೆಸ್ಟ್ ನಿರ್ಣಾಯಕವಾಗಿತ್ತು. ಆದರೆ ಈ ಪಂದ್ಯದ ಸೋಲಿನಿಂದ ಮೊದಲ ಬಾರಿಗೆ ಫೈನಲ್ ತಲುಪುವ ಹಾದಿಯನ್ನು ಟೀಮ್ ಇಂಡಿಯಾ ಅಂತ್ಯಗೊಳಿಸಿದೆ.
ಮೂರನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಗೆ ಈಗಾಗಲೇ ದಕ್ಷಿಣ ಆಫ್ರಿಕಾವು ಮೊದಲ ಬಾರಿಗೆ ಲಗ್ಗೆ ಇಟ್ಟಿದ್ದು, ಮತ್ತೊಂದು ತಂಡವನ್ನು ನಿರ್ಣಯಿಸಲು ಐದನೇ ಟೆಸ್ಟ್ ಪಂದ್ಯವು ಮಹತ್ತರ ಪಾತ್ರ ವಹಿಸಿತ್ತು.
ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡವು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೆ ಆಗ ಟೀಮ್ ಇಂಡಿಯಾದ ಪ್ರತಿಶತ ಅಂಕ ಶೇ.55.26ಕ್ಕೆ ಏರಿಕೆಯಾಗುತ್ತಿತ್ತು.ಆಗ ಆಸ್ಟ್ರೇಲಿಯಾವು ಫೈನಲ್ ಸುತ್ತು ತಲುಪಲು ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುತ್ತಿತ್ತು. ಒಂದು ವೇಳೆ ಆಸೀಸ್ ಎರಡು ಪಂದ್ಯಗಳನ್ನು ಸೋತಿದ್ದರೆ ಆಗ ಭಾರತ ತಂಡ ಫೈನಲ್ಗೆ ಲಗ್ಗೆ ಇಡುತ್ತಿತ್ತು.
ಆದರೆ ಈಗ ಆಸ್ಟ್ರೇಲಿಯಾದ ಪ್ರತಿಶತ ಅಂಕ 63.73ಕ್ಕೆ ತಲುಪುವ ಮೂಲಕ ಫೈನಲ್ ಟಿಕೆಟ್ ತನ್ನದಾಗಿಸಿಕೊಂಡಿದ್ದರೆ, ಸಿಡ್ನಿ ಟೆಸ್ಟ್ ಸೋಲಿನಿಂದ ಭಾರತ 50ಕ್ಕೆ ಕುಸಿದಿದೆ.
ಡಬ್ಲ್ಯುಟಿಸಿಯ ಹಿಂದಿನ ಎರಡು ಫೈನಲ್ ಗೆ ಲಗ್ಗೆ ಇಟ್ಟಿದ್ದ ಭಾರತ ತಂಡವು ಕ್ರಮವಾಗಿ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಎಡವಿದ್ದರೆ, ಈ ಬಾರಿ ಅಂತಿಮ ಸುತ್ತು ಪ್ರವೇಶಿಸದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.