ಬೆಂಗಳೂರು,ಮೇ.10– ಗಡಿಯಲ್ಲಿನ ಉದ್ವಿಗ್ನ ಸನ್ನಿವೇಶದ ಹಿನ್ನೆಲೆಯಲ್ಲಿ ಮುಂದಾಗಬಹುದಾದ ಬೆಳವಣಿಗೆಗಳು ಹಾಗೂ ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜೊತೆಗೆ ಎಲ್ಲೆಡೆ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಎಲ್ಲಾ ಮಹಾನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳ ಜೊತೆ ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ನಾಗರಿಕರ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತು ಪರಾಮರ್ಶೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಅಣೆಕಟ್ಟು, ವಿದ್ಯುತ್ ಸ್ಥಾವರ, ಪ್ರವಾಸಿ ತಾಣ, ಸರ್ಕಾರಿ ಸ್ವತ್ತುಗಳು, ಬೃಹತ್ ಕೈಗಾರಿಕೆಗಳು, ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಬಿಗಿಭದ್ರತೆ ಕಲ್ಪಿಸಲು ಈಗಾಗಲೇ ಆದೇಶ ನೀಡಲಾಗಿತ್ತು. ಆದರೆ ಮತ್ತಷ್ಟು ಸ್ಪಷ್ಟನೆಗಳು ಅಗತ್ಯವಿರುವ ಕಾರಣಕ್ಕಾಗಿ ಖುದ್ದು ಮುಖ್ಯಮಂತ್ರಿಯವರೇ ಸಭೆಯ ನೇತೃತ್ವ ವಹಿಸಲಿದ್ದಾರೆ.
ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ಶುರುವಾಗಿದೆ ಎಂಬಂತ ಸನ್ನಿವೇಶ ನಿರ್ಮಾಣವಾಗಿದ್ದು, ಕೆಲವು ವದಂತಿಗಳು ನಾಗರಿಕರನ್ನು ಬೆಚ್ಚಿಬೀಳುವಂತೆ ಮಾಡುತ್ತಿದೆ. ಅಪಪ್ರಚಾರಗಳು ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಅವುಗಳನ್ನು ನಿವಾರಣೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಧೈರ್ಯ ತುಂಬುವ ಸಲುವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಹಾರಧಾನ್ಯದ ಕೊರತೆ ಬಗ್ಗೆ ಅಪಪ್ರಚಾರಗಳು ನಡೆದಿದ್ದು, ಜನರು ಗೊಂದಲಕ್ಕೊಳಗಾಗಿ ದೈನಂದಿನ ಸಾಮಗ್ರಿಗಳು ಹಾಗೂ ದಿನಸಿ ಪದಾರ್ಥಗಳ ಸಂಗ್ರಹಣೆಯನ್ನು ಹೆಚ್ಚಿಸಲು ಮುಂದಾಗಿದ್ದರು.
ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಕೃತಕ ಅಭಾವದ ಸನ್ನಿವೇಶ ಸೃಷ್ಟಿಯಾಗಿತ್ತು. ಆದರೆ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಷಿಯವರೇ ಖುದ್ದು ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಆಹಾರ, ದಿನಸಿ ಪದಾರ್ಥ ಹಾಗೂ ದೈನಂದಿನ ಸಾಮಗ್ರಿಗಳ ಕೊರತೆಯಿಲ್ಲ, ಅನಗತ್ಯವಾಗಿ ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಸ್ಪಷ್ಟನೆ ನೀಡಿದ್ದರು.
ಸಂಕಷ್ಟದ ಸಂದರ್ಭದಲ್ಲಿ ಅದರಲ್ಲೂ ಅಂತಾರಾಷ್ಟ್ರೀಯ ಘರ್ಷಣೆಗಳ ವೇಳೆ ಕೆಲವು ದುಷ್ಕರ್ಮಿಗಳು ಈ ನಿಟ್ಟಿನ ವದಂತಿಗಳನ್ನು ಹರಡಿ ಸಾಮಾಜಿಕ ನೆಮದಿ ಕೆಡಿಸಲು ಪ್ರಯತ್ನಿಸುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಜೊತೆಗೆ ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿ ಸೂಚನೆಗಳನ್ನು ನೀಡಲಿದ್ದಾರೆ.ಗೃಹಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.