Friday, August 15, 2025
Homeಇದೀಗ ಬಂದ ಸುದ್ದಿದೀಪಾವಳಿಗೆ 'ಜಿಎಸ್‌‍ಟಿ ಗಿಫ್ಟ್' : ಪ್ರಧಾನಿ ಮೋದಿ ಘೋಷಣೆ

ದೀಪಾವಳಿಗೆ ‘ಜಿಎಸ್‌‍ಟಿ ಗಿಫ್ಟ್’ : ಪ್ರಧಾನಿ ಮೋದಿ ಘೋಷಣೆ

ನವದೆಹಲಿ, ಆ.15- ಸರಕು ಸೇವಾ ತೆರಿಗೆ (ಜಿಎಸ್‌‍ಟಿ) ವ್ಯವಸ್ಥೆಯ ಪ್ರಮುಖ ಸುಧಾರಣೆಯ ಬಗ್ಗೆ 79ನೇ ಸ್ವಾತಂತ್ರ್ಯೋತ್ಸವದ ತಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಸರ್ಕಾರವು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಮುಂದಿನ ಪೀಳಿಗೆಗೆ ಜಿಎಸ್‌‍ಟಿಯಲ್ಲಿ ಸುಧಾರಣೆಯನ್ನು ಪರಿಚಯಿಸಲು ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಈ ದೀಪಾವಳಿಗೆ ನಾನು ನಿಮಗೆ ಡಬಲ್‌ ಧಮಾಕ ನೀಡುತ್ತಿದ್ದೇನೆ. ನಿಮ ದೀಪಾವಳಿಯನ್ನು ನಾವು ದ್ವಿಗುಣಗೊಳಿಸುತ್ತಿದ್ದೇವೆ. ಈ ಮೂಲಕ ದೇಶದ ಜನತೆ ದೊಡ್ಡ ಉಡುಗೊರೆಯನ್ನು ದೀಪಾವಳಿಗೂ ಮುನ್ನವೇ ಪಡೆಯುವಂತಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಲವಾರು ತೆರಿಗೆಗಳು ಮತ್ತು ಸ್ಥಳೀಯ ಸುಂಕಗಳನ್ನು ಒಳಗೊಂಡಿರುವ ಜಿಎಸ್‌‍ಟಿ ಆಡಳಿತವನ್ನು ಉಲ್ಲೇಖಿಸಿ. ಸರ್ಕಾರವು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿ ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಇದರ ಸದ್ಭಳಕೆಗೆ ಈಗ ಸಮಯ ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಜಿಎಸ್‌‍ಟಿ ಪರಿಷ್ಕರಣೆಗಾಗಿ ಉನ್ನತಾಧಿಕಾರಿಗಳ ಸಮಿತಿ ರಚಿಸಲಾಗಿತ್ತು ಮತ್ತು ಈ ಸಂಬಂಧ ರಾಜ್ಯಗಳೊಂದಿಗೆ ಸಹ ಸಮಾಲೋಚಿಸಿ ನಂತರ ಹೊಸ ಜಿಎಸ್ಟಿ ಸುಧಾರಣೆಗಳನ್ನು ಸಿದ್ಧಪಡಿಸಿದೆ ಎಂದು ಅವರು ಹೇಳಿದರು.

ಇಂದು ಜಗತ್ತು ಯುಪಿಐ ಪ್ಲಾಟ್‌ಫಾರ್ಮ್‌ಅನ್ನು ಒಂದು ಅದ್ಭುತವೆಂದು ನೋಡುತ್ತದೆ. ಭಾರತದಲ್ಲಿ ಮಾತ್ರ ನಾವು ಇಂದು ಯುಪಿಐ ಮೂಲಕ 50% ನೈಜ-ಸಮಯದ ವಹಿವಾಟುಗಳನ್ನು ಮಾಡಲು ಸಮರ್ಥರಾಗಿದ್ದೇವೆ. ಅದು ಸಜನಶೀಲ ಜಗತ್ತಾಗಲಿ ಅಥವಾ ಸಾಮಾಜಿಕ ಮಾಧ್ಯಮವಾಗಲಿ, ಎಲ್ಲವೂ ಏಕೆ ನಮದಾಗಬಾರದು ಎಂದು ನಾನು ಯುವಕರಿಗೆ ಸವಾಲು ಹಾಕುತ್ತೇನೆ (ಕೇಳಲು) ನಾವು ಇತರರ ಮೇಲೆ ಏಕೆ ಅವಲಂಬಿತರಾಗಬೇಕು? ನಮ ಸಂಪತ್ತು ದೇಶದಿಂದ ಹೊರಗೆ ಏಕೆ ಹೋಗಬೇಕು? ನನಗೆ ನಿಮ ಸಾಮಥ್ರ್ಯಗಳಲ್ಲಿ ನಂಬಿಕೆ ಇದೆ ಎಂದು ಅವರು ಹೇಳಿದರು.

ಪ್ರಸ್ತುತ ಜಿಎಸ್‌‍ಟಿ ದರಗಳು ಐದು ಮುಖ್ಯ ಸ್ಲ್ಯಾಬ್‌ಗಳಲ್ಲಿದ್ದು, ಶೇ. 0 ರಿಂದ 28 ರವರೆಗೆ, ಶೇ. 12 ಮತ್ತು 18 ವ್ಯಾಪಕ ಶ್ರೇಣಿಯ ಸರಕು ಮತ್ತು ಸೇವೆಗಳಿಗೆ ಪ್ರಮಾಣಿತ ದರಗಳಾಗಿ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಸರಕುಗಳಲ್ಲಿ ಸುಮಾರು ಶೇ. 21 ರಷ್ಟು 5 ಪ್ರತಿಶತ ವರ್ಗಕ್ಕೆ, ಶೇ. 19 ರಷ್ಟು 12 ಪ್ರತಿಶತ ಬ್ರಾಕೆಟ್‌ಗೆ ಮತ್ತು ಶೇ. 44 ರಷ್ಟು 18 ಪ್ರತಿಶತ ಸ್ಲ್ಯಾಬ್‌ಗೆ ಬರುತ್ತವೆ.

ಸರ್ಕಾರವು ಈಗ ಶೇ. 12 ರ ಸ್ಲ್ಯಾಬ್‌ ಅನ್ನು ತೆಗೆದುಹಾಕಿ ಈ ವಸ್ತುಗಳನ್ನು ಶೇ. 5 ರಿಂದ 18 ರ ವರ್ಗಗಳ ನಡುವೆ ಮರುಹಂಚಿಕೆ ಮಾಡುವ ಬಗ್ಗೆ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೂ ಸುಧಾರಣೆಯ ನಿಖರವಾದ ರೂಪರೇಷೆಗಳು ಇನ್ನೂ ಅಂತಿಮಗೊಂಡಿಲ್ಲ. ಇದು ದೀಪಾವಳಿ ಉಡುಗೊರೆಯಾಗಲಿದೆ, ವ್ಯಕ್ತಿಗಳಿಗೆ ಅಗತ್ಯ ಸೇವೆಗಳ ಮೇಲಿನ ತೆರಿಗೆ ಗಣನೀಯವಾಗಿ ಕಡಿಮೆಯಾಗುತ್ತದೆ. ಎಂಎಸ್‌‍ಎಂಇಗಳು ಪ್ರಯೋಜನ ಪಡೆಯುತ್ತವೆ, ದಿನನಿತ್ಯದ ಉತ್ಪನ್ನಗಳು ಅಗ್ಗವಾಗುತ್ತವೆ ಮತ್ತು ಇದು ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಪ್ರಸ್ತಾವಿತ ಮುಂದಿನ ಪೀಳಿಗೆಯ ಜಿಎಸ್‌‍ಟಿ ಸರ್ಕಾರದ ಆರ್ಥಿಕ ಕಾರ್ಯಸೂಚಿಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗುವ ನಿರೀಕ್ಷೆಯಿದೆ, ಇದು ಬಳಕೆಯನ್ನು ಹೆಚ್ಚಿಸುವ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಪ್ರಚೋದನೆಯನ್ನು ನೀಡುವ ಗುರಿಯನ್ನು ಹೊಂದಿದೆ.ಗ್ರಾಹಕರ ಖರ್ಚನ್ನು ಹೆಚ್ಚಿಸುವ ಮತ್ತು ಮನೆಗಳು ಮತ್ತು ವ್ಯವಹಾರಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಬಯಕೆಯಿಂದ, ಕಡಿಮೆ ಜಿಎಸ್‌‍ಟಿ ದರಕ್ಕೆ ನಿರಂತರ ಬೇಡಿಕೆಗಳು ಕೇಳಿಬರುತ್ತಿವೆ. ಜುಲೈ 1, 2017 ರಂದು ಜಿಎಸ್ಟಿ ಜಾರಿಗೆ ತರಲಾಯಿತು. ಪರೋಕ್ಷ ತೆರಿಗೆ ಪದ್ಧತಿಯ ಎಂಟು ವರ್ಷಗಳು ಪೂರ್ಣಗೊಂಡ ನಂತರ, ಈ ಬದಲಾವಣೆಗಳನ್ನು ಪರಿಶೀಲಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.

RELATED ARTICLES

Latest News