ಬೆಂಗಳೂರು, ಜ.6- ಡೆಡ್ಲಿ ಕೊರೊನಾ ವೈರಸ್ ನಂತರ ಚೀನಾದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ ವೈರಸ್ ಕಾಟ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್‌ಎಂಪಿವಿ) ಸೋಂಕು ನಗರದ ಎಂಟು ತಿಂಗಳ ಮಗುವಿನಲ್ಲಿ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ಎಚ್‌ಎಂಪಿವಿ ಪತ್ತೆಯಾಗಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಎಂಟು ತಿಂಗಳ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಡಿಮೆಯಾಗಾದ ಹಿನ್ನೆಲೆಯಲ್ಲಿ ಮಗುವಿನ ರಕ್ತ ಪರೀಕ್ಷೆ ನಡೆಸಿದಾಗ ಎಚ್‌ಎಂಪಿವಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಗುವಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಹೆಚ್‌ಎಂವಿಪಿ ವೈರಸ್ ಇರುವುದು ದಢಪಟ್ಟಿದೆ.
ಚೀನಾದಲ್ಲಿ ಮರಣ ಮೃದಂಗ ಭಾರಿಸಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕೊರೊನಾ ವೈರಸ್ ದೇಶದಲ್ಲಿ ಮೊದಲು ಕಾಣಿಸಿಕೊಂಡಿದ್ದು ರಾಜ್ಯದಲ್ಲೇ ಎನ್ನುವುದು ವಿಶೇಷ. ಗುಲ್ಬರ್ಗಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಇಡೀ ದೇಶದಲ್ಲೇ ಸಾವಿನ ಸರಮಾಲೆಯನ್ನೇ ಸೃಷ್ಟಿಸಿತ್ತು. ಇದೀಗ ಚೀನಾವನ್ನು ಕಾಣುತ್ತಿರುವ ಎಚ್‌ಎಂಪಿವಿ ಕೂಡ ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ.
ಎಂಟು ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ಸೋಂಕು ಕಾಣಿಸಿಕೊಂಡಿರುವುದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ರಾಜ್ಯದ ಇತರ ಭಾಗಗಳಲ್ಲಿ ಯಾರಿಗಾದರೂ ಎಚ್‌ಎಂಪಿವಿ ಸೋಂಕು ತಗುಲಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದೆ.
ಹೀಗಾಗಿ ಇಂದು ಆರೋಗ್ಯ ಇಲಾಖೆ ಮಹತ್ವದ ಸಭೆ ಕರೆದಿದೆ. ಸಭೆಯಲ್ಲಿ ಸೋಂಕು ಪತ್ತೆಯಾಗಿರುವ ಮಗುವಿನ ರಕ್ತದ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಮಗುವಿನ ರಕ್ತದ ಮಾದರಿಯನ್ನು ಎನ್‌ಯೂ ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಇಂದು ಅಥವಾ ನಾಳೆ ಬರಲಿದ್ದು ನಂತರ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಚಳಿಗಾಲದಲ್ಲಿ ವೈರಸ್ ಸೋಂಕು ಸಾಮಾನ್ಯ. ಕೆಮು ಮತ್ತು ಶೀತ ಜ್ವರ ಬಂದವರು ಇತರರಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತಅವರು ಇತರ ಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. ಹಾಗೂ ಕೂಡಲೆ ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಅದರಲ್ಲೂ ಪೋಷಕರು ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಜ್ವರ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ಯಾವುದೇ ಭಾಗದಲ್ಲಿ ಯಾರೇ ಆಗಲಿ ಜ್ವರ ಮತ್ತಿತರ ಸೋಂಕಿನಿಂದ ಚಿಕಿತ್ಸೆ ಪಡೆಯಲು ಬಂದರೆ ಅವರ ರಕ್ತದ ಮಾದರಿ ಪಡೆದು ಪರೀಕ್ಷೆ ನಡೆಸುವಂತೆಯೂ ಇಲಾಖೆ ಎಲ್ಲಾ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ ಮಾತ್ರವಲ್ಲ, ಸರ್ಕಾರಿ ಅಥವಾ ಖಾಸಗಿ ಆಸ್ಫತ್ರೆಗಳಲ್ಲಿ ವೈರಸ್ ಪತ್ತೆಯಾದ ಬಗ್ಗೆ ಎಲ್ಲಾ ಡಿಹೆಚ್‌ಓಗಳಿಂದ ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಒಂದು ವೇಳೆ ಯಾರಿಗಾದರೂ ಸೋಂಕು ಲಕ್ಷಣಗಳು ಕಂಡು ಬಂದರೆ ಅವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದೆ.
ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದರೆ ಕಣ್ಣು, ಮೂಗು ಹಾಗೂ ಬಾಯಿ ಮುಟ್ಟಿಕೊಳ್ಳಬಾರದು, ಸೋಂಕಿತರು ಬಳಸುವ ವಸ್ತ್ರಗಳನ್ನು ಬೇರೆಯವರು ಬಳಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಬೇಡ , ತಕ್ಷಣ ತಜ್ಞ ವೈದ್ಯರನ್ನು ಭೇಟಿಯಾಗಿ ಔಷಧಿ ಸೇವಿಸುವುದು ಸೂಕ್ತ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳಲಾಗಿದೆ.