ದುಬೈ, ಫೆ.23- ವಿಶ್ವದ ಕೋಟ್ಯಾನುಕೋಟಿ ಕ್ರಿಕೆಟ್ ಪ್ರಿಯರು ಚಾಂಪಿಯನ್‌್ಸ ಟ್ರೋಫಿಯಲ್ಲಿಂದು ಕ್ರಿಕೆಟ್ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ.
ದುಬೈನ ಐತಿಹಾಸಿಕ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ನಡುವೆ ವಿಶ್ವದ ಬಹುತೇಕ ಎಲ್ಲ ಕ್ರೀಡಾ ಚಾನಲ್‌ಗಳು ಹಾಗೂ ಸುದ್ದಿವಾಹಿನಿಗಳು ಈ ರೋಚಕ ಪಂದ್ಯವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.
ಪ್ರತಿಬಾರಿ ಈ ಎರಡೂ ತಂಡಗಳು ಪರಸ್ಪರ ಎದುರಾದಾಗ ಏರ್ಪಡುವ ಸನ್ನಿವೇಶಗಳನ್ನು ಮರೆಯುವಂತಿಲ್ಲ. ಇದಕ್ಕಾಗಿ ಕೋಟ್ಯಂತರ ಅಭಿಮಾನಿಗಳು ಈಗ ಭಾರತ ಗೆಲ್ಲಲೇಬೇಕು ಎಂಬ ಛಲಕ್ಕೆ ಬಿದ್ದಿದ್ದಾರೆ. ಅದರಂತೆ ತಮ ಸ್ಟಾರ್ ಆಟಗಾರರನ್ನು ಹುರಿದುಂಬಿಸಲು ಇಂದು ಭಾನುವಾರ ಇಡೀ ಭಾರತ ದೇಶ ಕ್ರಿಕೆಟ್‌ನತ್ತ ದೃಷ್ಟಿ ಹರಿಸಿದೆ.
ಈಗಾಗಲೇ ಐಸಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿರುವ ಭಾರತ ಕಳೆದ ಬಾರಿ ಸೋತಿದ್ದು, ಬದ್ಧ ವೈರಿ ಪಾಕಿಸ್ತಾನ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು.ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಮೊದಲ ಪಂದ್ಯದಲ್ಲೇ ಸೋತು ಸುಣ್ಣವಾಗಿರುವ ಪಾಕಿಸ್ತಾನಕ್ಕೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು, ಸೋತರೆ ಗಂಡುಮೂಟೆ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹಿಂದಿರುಗಬೇಕಾಗುತ್ತದೆ.
ಮಧ್ಯಾಹ್ನ 1.30ಕ್ಕೆ ಆರಂಭಗೊಂಡ ಪಂದ್ಯದಲ್ಲಿ ಆಟಗಾರರು ಒಂದೆಡೆ ಒತ್ತಡದಲ್ಲಿದ್ದರೆ, ಕೋಟ್ಯಂತರ ಅಭಿಮಾನಿಗಳು ಕುತೂಹಲದ ಕ್ಷಣವನ್ನು ಸವಿಯಲು ಕಾತರರಾಗಿದ್ದಾರೆ.
ಕ್ಷಣ ಕ್ಷಣಕ್ಕೂ ಬದಲಾಗುವ ಪರಿಸ್ಥಿತಿಯಲ್ಲಿ ಉಗುರು ಕಚ್ಚಿಕೊಂಡು ಒತ್ತಡ ಅನುಭವಿಸುವ ಕ್ರಿಕೆಟ್ ಪ್ರಿಯರ ಭಾವನೆ ಹೇಳತೀರದು.
ಇಂತಹ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಗೆದ್ದು ಬೀಗಬೇಕಾಗಿದೆ ಎಂದು ಕ್ರಿಕೆಟ್ ಪ್ರಿಯರು ದೇವರಲ್ಲಿ ಮೊರೆ ಹೋಗಿದ್ದಾರೆ. ಇನ್ನು ಈ ಪಂದ್ಯದ ಟಿಕೆಟ್ ಕೂಡ ಕಾಳಸಂತೆಯಲ್ಲಿ ಮಾರಾಟವಾಗಿದ್ದು, ಸ್ವತಃ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ತನಗೆ ನೀಡಿದ್ದ ಟಿಕೆಟ್‌ಅನ್ನು ಕೋಟ್ಯಂತರ ರೂ.ಗೆ ಮಾರಾಟ ಮಾಡಿದ್ದಾರೆ.
ಅದರಂತೆಯೇ ಭಾರತದಿಂದಲೂ ಸಾಕಷ್ಟು ಮಂದಿ ದುಬೈಗೆ ತೆರಳಿದ್ದಾರೆ ಮತ್ತು ದುಬೈನಲ್ಲೂ ನೆಲೆಸಿರುವ ಭಾರತೀಯರು ಮೈದಾನದ ಸುತ್ತ ಅಳವಡಿಸಿದ್ದ ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸಿದ್ದಾರೆ.ಅಮೆರಿಕ, ಯೂರೋಪ್, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ, ಪಾಕಿಸ್ತಾನ, ಸಿಂಗಪುರ ಸೇರಿದಂತೆ ಬಹುತೇಕ ಎಲ್ಲ ದೇಶಗಳಲ್ಲೂ ಈ ಪಂದ್ಯ ಪ್ರಸಾರಗೊಂಡು ಹೊಸ ದಾಖಲೆ ಸೃಷ್ಟಿಸಿದೆ.
ಐಸಿಸಿ ಏಕದಿನ ಪಂದ್ಯಗಳಲ್ಲಿ ಭಾರತದ್ದೇ ಮೇಲುಗೈ ಇದ್ದು, ಈವರೆಗೆ ನಡೆದ ಎಂಟು ಪಂದ್ಯಗಳಲ್ಲಿ ಭಾರತ 7ರಲ್ಲಿ ಗೆದ್ದಿದ್ದು, ಒಂದು ಬಾರಿ ಮಾತ್ರ ಪಾಕಿಸ್ತಾನ ಗೆದ್ದಿದೆ.
ಮಿನಿ ವಿಶ್ವಕಪ್ ಎಂದೇ ಬಿಂಬಿತವಾಗುವ ಚಾಂಪಿಯನ್‌್ಸ ಟ್ರೋಫಿಯಲ್ಲಿ ಈ ಬಾರಿ ಭಾರತಕ್ಕೆ ಹೆಚ್ಚಿನ ಒಲವಿದ್ದು, ಭಾರತ ತಂಡದ ರೋಹಿತ್ ಪಡೆ ಉತ್ತಮ ಲಯದಲ್ಲಿದ್ದು, ತಕ್ಕ ತಿರುಗೇಟು ನೀಡಲಿದ್ದಾರೆ.