ಬೆಂಗಳೂರು,ಅ.14- ಗಡಿಯಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಭಾರತೀಯ ಸೈನಿಕರನ್ನು ಕಗ್ಗೊಲೆ ಮಾಡುತ್ತಿದ್ದು, ದೇಶದ ಭದ್ರತೆಗೆ ಆತಂಕ ಸೃಷ್ಟಿಸುತ್ತಿರುವ ಇಂತಹ ಕ್ಲಿಷ್ಟ ಸಮಯದಲ್ಲಿ ವಿಶ್ವಕಪ್ ಪಂದ್ಯಾವಳಿಗಾಗಿ ಆಗಮಿಸಿರುವ ಪಾಕಿಸ್ತಾನದ ಕ್ರಿಕೆಟಿಗರಿಗೆ ಬಿಸಿಸಿಐ ಅದ್ಧೂರಿ ಸ್ವಾಗತ ನೀಡಿ, ಐಷಾರಾಮಿ ಆತಿಥ್ಯ ನೀಡಿರುವುದು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಒಂದೆಡೆ ದೇಶಪ್ರೇಮ, ಭಾರತದ ಭದ್ರತೆ, ಭಯೋತ್ಪಾದನೆ ವಿರುದ್ಧ ಹೋರಾಟ ಎಂಬೆಲ್ಲಾ ಘೋಷಣೆಗಳ ಮೂಲಕ ಜನಸಾಮಾನ್ಯರ ಮನಸ್ಸನ್ನು ಉದ್ದಿಪ್ಪನಗೊಳಿಸುವುದು ಮತ್ತೊಂದೆಡೆ ಬಿಸಿಸಿಐ ನಂತಹ ಶ್ರೀಮಂತ ಕ್ರಿಕೆಟ್ ಸಂಸ್ಥೆ ಕ್ರೀಡೆಯಲ್ಲೂ ವ್ಯಾಪಾರ ದೃಷ್ಟಿಯನ್ನು ಅನುಸರಿಸಿ ಸಾಂಪ್ರದಾಯಿಕ ಎದುರಾಳಿಗಳನ್ನು ಗಣ್ಯ ಅತಿಥಿಗಳಂತೆ ಪರಿಗಣಿಸುವುದು ವಿಪರ್ಯಾಸಗಳಿಗೆ ಕಾರಣವಾಗಿದೆ.
ಇಂದು ಗುಜರಾತ್‍ನ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನದ ನಡುವೆ ಏಕದಿನ ವಿಶ್ವಕಪ್ ಸರಣಿ ಆಯೋಜನೆಗೊಂಡಿದೆ. ಅದಕ್ಕಾಗಿ ಭಾರತಕ್ಕೆ ಆಗಮಿಸಿದ ಭಾರತೀಯ ಕ್ರಿಕೆಟಿಗರನ್ನು ಬಿಸಿಸಿಐ ಅದ್ಧೂರಿ ಸ್ವಾಗತ ಕೋರಿದೆ.ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ದೇಶದ ವಿವಿಧೆಡೆಯ ಐಷಾರಾಮಿ ಹೋಟೆಲ್‍ಗಳಲ್ಲಿ ಗಣ್ಯ ಆತಿಥ್ಯ ಒದಗಿಸಲಾಗಿದೆ. ಪ್ರತಿಯೊಂದು ಕೊಠಡಿಗೂ 70 ಸಾವಿರದಿಂದ 4.50 ಲಕ್ಷದವರೆಗೂ ಬಾಡಿಗೆ ಪಾವತಿಸಿ ವಸತಿ ಕಲ್ಪಿಸಲಾಗಿದೆ.
ಇದಿಷ್ಟೇ ಅಲ್ಲದೆ, ಬೇರೆ ಯಾವ ದೇಶದ ತಂಡಕ್ಕೂ ಇಲ್ಲದಂತಹ ಗೌರವಾಧಾರಗಳನ್ನು ಪಾಕ್ ತಂಡಕ್ಕೆ ನೀಡಲಾಗಿದೆ ಎಂಬ ಆರೋಪಗಳಿವೆ. ಪಾಕ್ ಆಟಗಾರರಿಗೆ ಭಾರತೀಯ ಸಾಂಪ್ರದಾಯಿಕ ಶಾಲು ಹೊದಿಸಿ, ಹಾರ ತುರಾಯಿ ಹಾಕಿ, ನೃತ್ಯಗಾರರ ಮೂಲಕ ಅವರನ್ನು ಬರಮಾಡಿಕೊಳ್ಳಲಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!
ಭಾರತದ ಖ್ಯಾತ ಗಾಯಕರಾದ ಹರಿಜಿತ್ ಸಿಂಗ್, ಸುಖುವಿಂದರ್ ಸಿಂಗ್, ಸುನಿದಿ ಚೌವ್ಹಾಣ್, ನೇಹಾ ಕಾಕ್ಕರ್, ಶಂಕರ್ ಮಹದೇವನ್ ಸೇರಿದಂತೆ ಹಲವರು ಪಾಕ್ ಕ್ರೀಡಾಳುಗಳ ಎದುರು ಸಂಗೀತ ರಸಸಂಜೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಪಾಕ್ ಕ್ರಿಕೆಟಿಗರಿಗೆ ವಿಶೇಷ ಆತಿಥ್ಯ ವ್ಯವಸ್ಥೆ ಮಾಡಿದ್ದಕ್ಕಾಗಿ ಬಿಸಿಸಿಐ ಜೊತೆಗೆ ಅದರ ಕಾರ್ಯದರ್ಶಿ ಜಯ್ ಶಾ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ.
ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರನ್ನು ಬೆಂಬಲಿಸಿದ್ದ. ಆತನ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಆತನನ್ನು ಭಾರತಕ್ಕೆ ಬಂದು ಆಟವಾಡಲು ಏಕೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಈ ಹಿಂದೆ ಎಂ.ಎಸ್.ದೋನಿ ಅವರು ಭಾರತೀಯ ಸೇನೆಯ ಚಿನ್ಹೆಯನ್ನು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಹಾಕಿಕೊಂಡಿದ್ದರು ಅದನ್ನು ತೆರವುಗೊಳಿಸುವಂತೆ ಐಸಿಸಿ ಸೂಚನೆ ನೀಡಿತ್ತು. ಐಸಿಸಿ ಯ ಆದಾಯಕ್ಕೆ ಬಿಸಿಸಿಐ ಶೇ. 40 ರಷ್ಟು ಪಾಲು ನೀಡುತ್ತಿದೆ. ಇಂತಹ ಶ್ರೀಮಂತ ಸಂಸ್ಥೆ ಐಸಿಸಿ ನಿರ್ಣಯಗಳ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗಲಿಲ್ಲವೆ, ಪಾಕ್‍ನೊಂದಿಗಿನ ಭಾರತದ ಮನೋಧೋರಣೆಯನ್ನು ಅರ್ಥ ಮಾಡಿಸಲು ವೈಫಲ್ಯವಾಗಿದ್ದೇಕೆ ಎಂದು ಕಿಡಿ ಕಾರಲಾಗುತ್ತಿದೆ.
ಐಸಿಸಿ ಹೇಳಿದಾಕ್ಷಣ ಪಾಕ್ ಕ್ರಿಕೆಟಿಗರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸುವ ಅಗತ್ಯವಿತ್ತೇ, ಗಡಿಯಲ್ಲಿ ಪದೇಪದೇ ಭಾರತೀಯ ಸೈನಿಕರ ಬಲಿದಾನವನ್ನು ಕ್ರಿಕೆಟ್ ಸಂಸ್ಥೆ ಮರೆತಿದ್ದೇಕೆ, ಅವರ ಕುಟುಂಬದ ಸದಸ್ಯರ ನೋವಿಗೆ ಸ್ಪಂದಿಸದೇ ಇರುವುದು ಯಾವ ದೇಶಪ್ರೇಮ ಎಂದು ಪ್ರಶ್ನಿಸಲಾಗಿದೆ.
ಪಾಕ್ ಕ್ರಿಕೆಟಿಗರಿಗೆ ರೊಟ್ಟಿ ತಿನ್ನಲು ಗತಿಯಿಲ್ಲ. ಅಂತವರನ್ನು ಭಾರತಕ್ಕೆ ಕರೆತಂದು ಲಕ್ಷಾಂತರ ರೂ.ಗಳ ಖರ್ಚು ಮಾಡಿ ಐಷಾರಾಮಿ ಹೋಟೆಲ್‍ನಲ್ಲಿರಿಸಿ ಬಿರಿಯಾನಿ ತಿನಿಸುವ ಅಗತ್ಯವೇನಿದೆ. ಭಾರತ ಕ್ರಿಕೆಟ್ ಪಂದ್ಯಾವಳಿಯನ್ನು ನಿಷೇಸಬೇಕು ಎಂಬ ಕೂಗುಗಳಿವೆ.ಒಂದೆಡೆ ಗಡಿಯಾಚೆಗಿನ ಭಯೋತ್ಪಾದನೆ ಕಾರಣಕ್ಕಾಗಿ ಪಾಕ್‍ನೊಂದಿಗಿನ ರಾಜತಾಂತ್ರಿಕ, ವಾಣಿಜ್ಯೋದ್ಯಮ ಸಂಬಂಧಗಳಿಗೆ ಭಾರತ ಕಡಿವಾಣ ಹಾಕಿದೆ.
ದೇಶದ ಜನರಲ್ಲಿ ಪಾಕ್ ವಿರುದ್ಧವಾಗಿರುವ ಅಸಹನೆಯನ್ನು ಗೌರವಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರೀಡೆಯ ನೆಪದಲ್ಲಿ ಸಾಂಪ್ರದಾಯಿಕ ಎದುರಾಳಿಗಳಿಗೆ ರಾಜಮರ್ಯಾದೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ.