ಮಾಸ್ಕೋ, ಏ.29: ರಷ್ಯಾ ಒಕ್ಕೂಟದ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರ ನೇತೃತ್ವದಲ್ಲಿ ಮಾಸ್ಕೋ ಮೂಲದ ಭಾರತೀಯ ವಲಸಿಗರು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ 26 ಮಂದಿಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಭಾರತೀಯ ರಾಯಭಾರ ಕಚೇರಿಯ ಕಿಕ್ಕಿರಿದ ಡಿಪಿ ಧಾರ್ ಹಾಲ್‌ನ್ನಲ್ಲಿ, ಪದ್ಮಶ್ರೀ ಪುರಸ್ಕೃತ ಮತ್ತು ಇನ್ಸ್ಟಿಟ್ಯೂಟ್ ಆಫ್ ಓರಿಯಂಟಲ್ ಸ್ಟಡೀಸ್ ಅಂಡ್ ರಿಸರ್ಚ್ನ ಭಾರತ ಕೇಂದ್ರದ ಮುಖ್ಯಸ್ಥೆ ಟಟಿಯಾನಾ ಶೌಮ್ಯಾನ್ ಅವರು ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತದ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು.ರಾಯಭಾರಿ ಕುಮಾರ್ ಅವರು ನಾಗರಿಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ದುಃಖ ವ್ಯಕ್ತಪಡಿಸಿದರು.
ಭಾರತದಂತಹ ಬಹುತ್ವದ ಸಮಾಜವನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶದಲ್ಲಿ, ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವುದು ಸಹಜ ಎಂದು ಅವರು ಹೇಳಿದರು.ಭಿನ್ನಾಭಿಪ್ರಾಯವನ್ನು ಶಾಂತಿಯುತವಾಗಿ ವ್ಯಕ್ತಪಡಿಸಲು ನಮಗೆ ಹಲವಾರು ವೇದಿಕೆಗಳಿವೆ ಎಂದು ಅವರು ಭಯೋತ್ಪಾದಕ ಹಿಂಸಾಚಾರವನ್ನು ಖಂಡಿಸಿದರು.ಸಂತಾಪ ಸಭೆಯಲ್ಲಿ ಮಾತನಾಡಿದ ಬ್ರಹ್ಮಕುಮಾರಿಗಳ ಮಾಸ್ಕೋ ಅಧ್ಯಾಯದ ಮುಖ್ಯಸ್ಥೆ ಸುಧಾ ದೀದಿ ಸಂತಾಪ ಸಭೆಯನ್ನು ಶಾಂತಿ ಸಭೆಯಾಗಿ ಪರಿವರ್ತಿಸುವಂತೆ ಒತ್ತಾಯಿಸಿದರು.