ದೆಹಲಿ, ಮೇ 22- ಜಗತ್ತಿನಾದ್ಯಂತ ನಾನಾ ರೀತಿಯ ಸಮಸ್ಯೆಗಳಿಂದ ಬೆಳವಣಿಗೆ ಕುಂಠಿತಗೊಳ್ಳುತ್ತಿದ್ದರೂ, ಭಾರತ ಮಾತ್ರ ತನ್ನ ಪ್ರಗತಿಯ ಹಾದಿಯಲ್ಲಿ ದಾಪುಗಾಲು ಹಾಕುತ್ತಿದೆ ಮತ್ತು ಸ್ವಾವಲಂಬನೆಯತ್ತ ಮುನ್ನುಗ್ಗುತ್ತಿದೆ ಎಂದು ಆರ್‌ಬಿಐ ವರದಿ ಮಾಡಿದೆ.
ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಾರ ಉದ್ವಿಗ್ನತೆಗಳು, ನೀತಿಗಳ ಅನಿಶ್ಚಿತತೆ ಮತ್ತು ಗ್ರಾಹಕರ ನಿರಾಸಕ್ತಿ ಜಾಗತಿಕ ಬೆಳವಣಿಗೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಹಿನ್ನಡೆಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಂಡಿದೆ ಮತ್ತು ಸ್ಥಿರ ಪ್ರಗತಿಯ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ವರದಿಯು ಉಲ್ಲೇಖಿಸಿದೆ.
ಭಾರತ ಕೈಗಾರಿಕಾ ಉತ್ಪಾದನೆ ಮತ್ತು ಸೇವಾ ವಲಯಗಳ ವಿವಿಧ ಅಧಿಕ ಆವರ್ತನ ಸೂಚಕಗಳು ಏಪ್ರಿಲ್‌ನಲ್ಲಿ ತಮ್ಮ ಆವೇಗವನ್ನು ಉಳಿಸಿಕೊಂಡಿವೆ. ನಿರಂತರ ವ್ಯಾಪಾರ ಘರ್ಷಣೆಗಳು, ನೀತಿ ನಿರೂಪಣೆಯಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ ಮತ್ತು ಗ್ರಾಹಕರ ವಿಶ್ವಾಸ ಕುಸಿತ ವಿಶ್ವ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಸುಂಕಗಳಲ್ಲಿ ತಾತ್ಕಾಲಿಕ ವಿರಾಮ ಸ್ವಲ್ಪ ಪರಿಹಾರ ನೀಡಿದ್ದರೂ, ಒಟ್ಟಾರೆ ಜಾಗತಿಕ ದೃಷ್ಟಿಕೋನವು ದುರ್ಬಲವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸುಂಕಗಳ ಕಾರಣಕ್ಕೆ ಏಷ್ಯಾ ಖಂಡದಲ್ಲಿ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು ನಿಧಾನ ಗತಿಯಲ್ಲಿವೆ. ಜಾಗತಿಕ ಬೆಳವಣಿಗೆಯ ಮುನ್ಸೂಚನೆಗಳಿಗೆ ಹಣಕಾಸಿನ ಪ್ರಕ್ಷುಬ್ಧತೆ ಪ್ರಮುಖ ಅಪಾಯವಾಗಿದೆ. ಈ ಜಾಗತಿಕ ಅನಿಶ್ಚಿತತೆಗೆ ವ್ಯತಿರಿಕ್ತವಾಗಿ, ಭಾರತದ ಆರ್ಥಿಕತೆ ತನ್ನ ಬಲವನ್ನು ಪ್ರದರ್ಶಿಸಿದೆ ಎಂದು ವರದಿ ತಿಳಿಸಿದೆ.
-ಏಪ್ರಿಲ್‌ನಲ್ಲಿ ಕೈಗಾರಿಕಾ ಮತ್ತು ಸೇವಾ ವಲಯಗಳೆರಡರಲ್ಲೂ ಹೆಚ್ಚಿನ ಆವರ್ತನದ ಸೂಚಕಗಳು ತಮ್ಮ ಆವೇಗವನ್ನು ಕಾಯ್ದುಕೊಂಡಿವೆ. ಈ ಸ್ಥಿತಿಸ್ಥಾಪಕತ್ವವು ದಾಖಲೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್) ಸಂಗ್ರಹಗಳಲ್ಲಿ ಮತ್ತಷ್ಟು ಪ್ರತಿಫಲಿಸಿದೆ. ಕೃಷಿ ವಲಯವೂ ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. 2025 ರ ನೈಋತ್ಯ ಮಾನ್ಸೂನ್ ಅನುಕೂಲಕರ ಮುನ್ಸೂಚನೆಗಳು ಗ್ರಾಮೀಣ ಆದಾಯ ಮತ್ತು ಆಹಾರ ಉತ್ಪಾದನೆಗೆ ಸಕಾರಾತ್ಮಕ ಸಂಕೇತಗಳಾಗಿವೆ ಎಂದು ನಿರೀಕ್ಷಿಸಲಾಗಿದೆ.
ಸ್ಥಿರತೆ, ಹಣಕಾಸು, ರಾಜಕೀಯ ವ್ಯವಸ್ಥೆ, ನೀತಿ ಸ್ಥಿರತೆ ಮತ್ತು ನಿಶ್ಚಿತತೆ, ಅನುಕೂಲಕರ ವ್ಯಾಪಾರ ವಾತಾವರಣ, ಬಲವಾದ ಸ್ಕೂಲ ಆರ್ಥಿಕ ಮೂಲಭೂತ ಅಂಶಗಳಿಂದ ಭಾರತದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದೆ ಎಂದು ಆರ್‌ಬಿಐ ಹೇಳಿದೆ. ಹಣದುಬ್ಬರ ಪ್ರವೃತ್ತಿಗಳು ಸಹ ಉತ್ತೇಜನಕಾರಿಯಾಗಿವೆ.
2019ರ ಜುಲೈ ನಂತರ ಕಳೆದ ಆರು ತಿಂಗಳಿನಿಂದಲೂ ಸತತವಾಗಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಕುಸಿದು ಅದರ ಕನಿಷ್ಠ ಮಟ್ಟವನ್ನು ತಲುಪಿದೆ. ಇದರಿಂದ ಆಹಾರ ಬೆಲೆಗಳು ತಗ್ಗಲಾರಂಭಿಸಿವೆ. ಏಪ್ರಿಲ್‌ನಲ್ಲಿ ದೇಶೀಯ ಹಣಕಾಸು ಮಾರುಕಟ್ಟೆಗಳು ಒತ್ತಡದಲ್ಲಿದ್ದವು, ಆದರೆ ಮೇ ಮೂರನೇ ವಾರದಲ್ಲಿ ಬದಲಾವಣೆ ಕಂಡಿವೆ ಎಂದು ವರದಿ ಗಮನಿಸಿದೆ.
ಆಟೋಮೊಬೈಲ್ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಪ್ರಿಲ್‌ನಲ್ಲಿ ಸಗಟು ವಾಹನ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.13.3 ರಷ್ಟು ಕುಸಿದಿದೆ. ದ್ವಿಚಕ್ರ ವಾಹನ ಮಾರಾಟ ತಗ್ಗಿದೆ. ಟ್ರ್ಯಾಕ್ಟರ್ ಮಾರಾಟ ಬೆಳವಣಿಗೆ ಕಂಡಿದೆ. ಆದರೆ ವೇಗ ಕೊಂಚ ತಗ್ಗಿದೆ. ವಾಹನ ನೋಂದಣಿಗಳು ವರ್ಷದಿಂದ ವರ್ಷಕ್ಕೆ ಶೇ. 2.9 ರಷ್ಟು ಏರಿಕೆಯಾಗಿದ್ದು, ಸಾರಿಗೆ ವಲಯ 2025ರ ಏಪ್ರಿಲ್‌ನಲ್ಲಿ ಆರು ತಿಂಗಳಲ್ಲಿನ ಅತ್ಯಧಿಕ ಬೆಳವಣಿಗೆಯನ್ನು ಕಂಡಿದೆ ಎಂದು ತಿಳಿಸಲಾಗಿದೆ.
ಒಟ್ಟಿನಲ್ಲಿ ಇಡೀ ಜಗತ್ತೇ ಆರ್ಥಿಕ ಅನಿಶ್ಚಿತತೆಯೊಂದಿಗೆ ಹೋರಾಡುತ್ತಿರುವಾಗ, ಭಾರತವು ದೀರ್ಘಾವಧಿಯ ಹೂಡಿಕೆದಾರರಿಗೆ ಭರವಸೆಯ ತಾಣವಾಗಿ ಕಂಡು ಬಂದಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಹೇಳಿದೆ.