ಬೆಂಗಳೂರು,ಮಾ.29- ಇಂಡಿಯನ್ ಮೂವ್ಮೆಂಟ್ ಪಾರ್ಟಿ ಇಂದು 7 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇಂಡಿಯನ್ ಮೂವ್ ಮೆಂಟ್ ಪಾರ್ಟಿ ರಾಜ್ಯಾಧ್ಯಕ್ಷರಾದ ಮಹದೇವ್ ಉರಗಾಂವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫರ್ ರಾಜ್ ಕುಮಾರ್, ಜೆಡಿಯು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಮಹಿಳಾ ಘಟಕದ ಅಧ್ಯಕ್ಷೆ ರಷೀಧಾ ಬೇಗಂ ಮತ್ತಿತರರು ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹದೇವ್ ಉರಗಾಂವಿ ಅವರು, ಪರಿಹಾರ ಕಂಡುಕೊಳ್ಳುಲು ಇಂಡಿಯನ್ ಮೂವ್ ಮೆಂಟ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಸುಭಾನ್ ರವರ ನೇತೃತ್ವದಲ್ಲಿ ಪಾರ್ಟಿ ಸದೃಢವಾಗಿದೆ ಎಂದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತದಂತೆ ಎಲ್ಲ ವರ್ಗ, ಧರ್ಮ ಜಾತಿಯವರನ್ನ ಸರಿಸಮಾನ ಕಂಡು ಅಭಿವೃದ್ದಿಯತ್ತ ಸಾಗುವುದು ಇಂಡಿಯನ್ ಮೂವ್ ಮೆಂಟ್ ಪಾರ್ಟಿಯ ಉದ್ದೇಶ ಎಂದು ಅವರು ಮಾಹಿತಿ ನೀಡಿದರು.
ಜನಸಾಮಾನ್ಯರ ಬದುಕು ಹಸನಾಗಬೇಕು, ಬಡವರು, ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಆರ್ಥಿಕ ಭದ್ರತೆ ಮತ್ತು ಆಶ್ರಯ ಸಿಗಬೇಕು ಅದಕ್ಕಾಗಿ ನಮ್ಮ ಹೋರಾಟ ಎಂದು ಅವರು ತಿಳಿಸಿದರು.ಇಂದು ಅಡುಗೆ ಆನಿಲ, ಪೆಟ್ರೋಲ್ ಮತ್ತು ದಿನಬಳಕೆ ಆಹಾರ ಪದಾರ್ಥಗಳು ಬೆಲೆ ಏರಿಕೆಯಿಂದ ಜನ ಜೀವನ ಸಂಕಷ್ಟದಲ್ಲಿ ಇದ್ದಾರೆ. ಅದ್ದರಿಂದ ಇಂಡಿಯನ್ ಮೂವ್ ಮೆಂಟ್ ಪಾರ್ಟಿ ಜನ ಸಾಮಾನ್ಯರಿಗೆ ನೋವಿಗೆ ಧ್ವನಿಯಾಗಿ, ಅವರ ಸಂಕಷ್ಟ ನಿವಾರಣೆ ಮಾಡಲು ಅಧಿಕಾರದಲ್ಲಿ ನಮ್ಮ ಪಾರ್ಟಿ 7 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ ಎಂದರು.
ಈಗ 7ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಮೊದಲನೇಯ ಪಟ್ಟಿ ಬಿಡುಗಡೆ ಮಾಡಲಾಗಿದೆ ಎರಡನೇಯ ಪಟ್ಟಿಯಲ್ಲಿ 8ಕ್ಷೇತ್ರ ಮತ್ತು ದೇಶದ್ಯಾಂತ 150ಗಳಲ್ಲಿ ಅಭ್ಯರ್ಥಿಗಳು ನಮ್ಮ ಪಕ್ಷದಿಂದ ನಿಲ್ಲುತ್ತಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ರೈತ ಸಂಘ, ಕನ್ನಡ ಪರ ಸಂಘಟನೆಗಳು ಮತ್ತು ಸ್ವಯಂ ಸೇವ ಸಂಘಟನೆಗಳು ನಮ್ಮ ಪಾರ್ಟಿಯ ಲೋಕಸಭಾ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರಕ್ಕೆ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕ್ರಿಸ್ಟೋಫರ್ ರಾಜ್ ಕುಮಾರ್, ಕೋಲಾರದಿಂದ ಹರ್ಷ, ಬೆಂಗಳೂರು ಕೇಂದ್ರದಿಂದ ಉಮಾ ಸಿ, ಚಿತ್ರದುರ್ಗ ಎಸ್ಸಿ.ಮೀಸಲು ಕ್ಷೇತ್ರದಿಂದ ಬಿ.ಟಿ.ರಾಮಸುಬ್ಬಯ್ಯ, ದಕ್ಷಿಣ ಕನ್ನಡದಲ್ಲಿ ಸುಪ್ರೀತ್ ಕುಮಾರ್ ಪೂಜಾರಿ, ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕುಡಲೂರು ಶ್ರೀಧರ್ ಮೂರ್ತಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕೋದಂಡರೆಡ್ಡಿ ಸ್ಪರ್ದಿಸುತ್ತಿದ್ದಾರೆ ಎಂದು ಅವರು ಹೇಳಿದರು.