ನವದೆಹಲಿ,ಜು.23- ಭಾರತೀಯ ನೌಕಾಪಡೆಯ ಪ್ರಮುಖ ಯುದ್ಧ ನೌಕೆಯಾದ ಐಎನ್‍ಎಸ್ ಬ್ರಹ್ಮಪುತ್ರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ನೌಕೆಯ ಪ್ರಮುಖ ಭಾಗಗಳು ಸುಟ್ಟು ಕರಕಲಾಗಿದ್ದು, ನೌಕೆಯಲ್ಲಿದ್ದವರ ಪೈಕಿ ಒಬ್ಬ ನಾವಿಕ ನಾಪತ್ತೆಯಾಗಿದ್ದಾರೆ. ಒಬ್ಬ ಕಿರಿಯ ನಾವಿಕ ನಾಪತ್ತೆಯಾಗಿದ್ದು, ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದಾಗ್ಯೂ, ನೌಕೆಯಲ್ಲಿದ್ದ ಎಲ್ಲ ಸಿಬ್ಬಂದಿಯೂ ಸುರಕ್ಷಿತರಾಗಿದ್ದಾರೆ ಎಂಬುದಾಗಿ ನೌಕಾಪಡೆಯು ಪ್ರಕಟಣೆ ತಿಳಿಸಿದೆ.
ಮುಂಬೈನಲ್ಲಿರುವ ನೌಕಾಪಡೆಯ ನೌಕಾನೆಲೆಯಲ್ಲಿ ಕ್ಷಿಪಣಿಗಳನ್ನು ಉಡಾಯಿಸಬಹುದಾದ ಸಾಮಥ್ರ್ಯ ಇರುವ ಯುದ್ಧನೌಕೆಯ ನಿರ್ವಹಣೆ ಮಾಡಲಾಗುತ್ತಿತ್ತು. ಸಿಬ್ಬಂದಿಯು ಯುದ್ಧ ನೌಕೆಯ ತಪಾಸಣೆ, ಸಣ್ಣ-ಪುಟ್ಟ ದುರಸ್ತಿಯಲ್ಲಿ ತೊಡಗಿದ್ದರು. ಇದೇ ವೇಳೆ ಅಗ್ನಿ ದುರಂತ ಸಂಭವಿಸಿದೆ. ಅಗ್ನಿಯ ಕೆನ್ನಾಲಗೆಗೆ ನೌಕೆಯ ಪ್ರಮುಖ ಭಾಗಗಳು ಸುಟ್ಟಿವೆ. ಇದೇ ವೇಳೆ ಒಬ್ಬ ನಾವಿಕ ನಾಪತ್ತೆಯಾಗಿದ್ದಾನೆ. ಆತನಿಗಾಗಿ ತೀವ್ರ ಪ್ರಮಾಣದಲ್ಲಿ ಶೋಧ ನಡೆದಿದೆ ಎಂದು ನೌಕಾಪಡೆಯು ಮಾಹಿತಿ ನೀಡಿದೆ.
ಮುಂಬೈನ ನೌಕಾನೆಲೆಯಲ್ಲಿ ನಿನ್ನೆ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿಯ ಕೆನ್ನಾಲಗೆಯು ಬಂದರಿನ ಬೇರೆ ಹಡಗುಗಳಿಗೂ ವ್ಯಾಪಿಸದಂತೆ ನೋಡಿಕೊಂಡರು. ಸಿಬ್ಬಂದಿಯು ಯುದ್ಧನೌಕೆಯನ್ನು ತಪಾಸಣೆ ಮಾಡುವಾಗ ಅವಘಡ ಸಂಭವಿಸಿದೆ. ದುರಂತಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ನೌಕಾಪಡೆ ತಿಳಿಸಿದೆ. ಅಗ್ನಿ ದುರಂತದಲ್ಲಿ ಯುದ್ಧನೌಕೆಗೆ ಭಾರಿ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಐಎನ್‍ಎಸ್ ಬ್ರಹ್ಮಪುತ್ರ ಯುದ್ಧನೌಕೆಯನ್ನು ದೇಶೀಯವಾಗಿಯೇ, ಕೋಲ್ಕೊತಾದಲ್ಲಿ ನಿರ್ಮಿಸಲಾಗಿದೆ. 2000ನೇ ಇಸವಿಯಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಅಳವಡಿಸಿಕೊಳ್ಳಲಾಗಿದೆ. ಸುಮಾರು 3,600 ಟನ್ ತೂಕ ಇರುವ ಇದು, 410 ಅಡಿ ಉದ್ದ ಇದೆ. ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮಥ್ರ್ಯ ಹೊಂದಿದ್ದು, ಕ್ಷಿಪಣಿಗಳನ್ನು ಉಡಾಯಿಸಿ, ವೈರಿಗಳನ್ನು ನಿರ್ನಾಮ ಮಾಡಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆಗೆ ಇದನ್ನು ಬಳಸಲಾಗಿದೆ.